ಉಳ್ಳಾಲ, ಸೆ23: ಆಹಾರ ಸಚಿವರಾದ ಯು.ಟಿ ಖಾದರ್ ಅವರ ಸ್ವ ಕ್ಷೇತ್ರದಲ್ಲಿಯೇ ಸಮಸ್ಯೆಗಳಿವೆ. ಉಳ್ಳಾಲದ ಬೇರೆ ಬೇರೆ ವ್ಯಾಪ್ತಿಯಲ್ಲಿ ಸುತ್ತಾಡುವ ಸಚಿವರಿಗೆ ಅವರ ಕ್ಷೇತ್ರದಲ್ಲಿಯೇ ಜನರು ಅನುಭವಿಸುತ್ತಿರುವ ಸಮಸ್ಯೆ ಯಾಕೆ ಕಾಣಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಆಹಾರ ಸಚಿವ ಯು.ಟಿ ಖಾದರ್ ಸ್ವ ಕ್ಷೇತ್ರವಾದ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಪಡಿತರ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ತಲೆದೋರಿದೆ. ಈ ಅವ್ಯವಸ್ಥೆಯ ವಿರುದ್ಧ ಬಿಜೆಪಿ ಪಕ್ಷದ ಉಳ್ಳಾಲ ಘಟಕ, ತೊಕ್ಕೊಟ್ಟಿನಲ್ಲಿರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದರು. ಈ ಭಾಗದ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಬಿಜೆಪಿ ನಾಯಕರು ಮನವರಿಕೆ ಮಾಡಿದರು. ಉಳ್ಳಾಲ ಸುತ್ತಮುತ್ತಲೇ ತಿರುಗಾಡುತ್ತಿರುವ ಸಚಿವರಿಗೆ ತಮ್ಮ ಕ್ಷೇತ್ರದಲ್ಲಿ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ ಎಂದು ಬಿಜೆಪಿ ನಾಯಕರು ದೂರಿದರು. ಈ ಕೂಡಲೇ ಸಮಸ್ಯೆಯನ್ನು ಸರಿಪಡಿಸುವಂತೆ ಆಹಾರ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.