ಹೆಮ್ಮಾಡಿ, ಮೇ 03: ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಸ್ಥಾನದ ಊಟ ನಿಲ್ಲಿಸಲು ಸುಕುಮಾರ್ ಶೆಟ್ಟಿ ಹೇಳಿದ್ದಾರೆ ಎನ್ನುವ ಸಚಿವ ರಮಾನಾಥ ಹೇಳಿಕೆ ಆಧಾರರಹಿತವಾಗಿದ್ದು, ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಈ ರೀತಿ ಗಿಮಿಕ್ಗಳನ್ನು ಸೃಷ್ಟಿ ಮಾಡಿದ್ದಾರೆ. ವಾಸ್ತವವಾಗಿ ನಾನು ಸಚಿವ ರೈ ಜೊತೆ ಮಾತನಾಡಿಯೇ ಇಲ್ಲ. ಈ ಬಗ್ಗೆ ಸಾಕ್ಷ್ಯಾಧಾರಗಳು ಇದ್ದರೆ ಅವರು ಅದನ್ನು ಬಹಿರಂಗಗೊಳಿಸಲಿ ಎಂದು ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
ಅವರು ಮೇ.3ರಂದು ಹೆಮ್ಮಾಡಿಯಲ್ಲಿರುವ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಈ ದೇಶದ ಕಟ್ಟಕಡೆಯ ಮಗು ಕೂಡಾ ಶಿಕ್ಷಣ ಪಡೆಯಬೇಕು ಎನ್ನುವ ಧ್ಯೇಯ ನನ್ನದು. ಮಕ್ಕಳೆಂದರೆ ನನಗೆ ಅತ್ಯಂತ ಇಷ್ಟ. ಹಾಗಿರುವಾಗ ನಾನು ಶಾಲಾ ಮಕ್ಕಳ ಊಟಕ್ಕೆ ಅಡ್ಡಿ ಮಾಡಿದ್ದೆನೆಂದರೆ ಯಾರೂ ಒಪ್ಪುವುದಿಲ್ಲ. ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯ ಮತ್ತು ಕಾಂಗ್ರೆಸ್ಗೆ ಸೋಲಿನ ಭೀತಿ ಆವರಿಸಿರುವುದರಿಂದ ಹತಾಶರಾದ ಈ ಭಾಘದ ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ರೈ ಈ ತರ ಮಾತನಾಡಿರಬಹುದು. ಬಿಟ್ಟರೆ ಸಚಿವ ರೈಗೂ ನನಗೂ ಯಾವುದೇ ರೀತಿಯ ಸಂಪರ್ಕವಿಲ್ಲ. ನಾನು ಕಲ್ಲಡ್ಕ ಪ್ರಭಾಕರ ಭಟ್ಟರ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದನ್ನು ಸಹಿಸದೇ ಈ ರೀತಿ ಅಪಪ್ರಚಾರ ಮಾಡುತ್ತಿರಬಹುದು ಎಂದರು.
2002 ರಲ್ಲಿ ಸರ್ಕಾರದ ಬಿಸಿಯೂಟ ಆರಂಭಕ್ಕೂ ಮುಂಚೆ ಕೊಲ್ಲೂರು ದೇವಸ್ಥಾನದ ಮೂಲಕ ಎಲ್ಲಾ ಶಾಲೆಗಳಿಗೂ ಜಾತಿ-ಧರ್ಮ ಪರಿಗಣಿಸಿದೆ 23500 ಮಕ್ಕಳಿಗೆ ಅನ್ನಪ್ರಸಾದ ನೀಡಲಾಗಿತ್ತು. ಬಿ.ಎಲ್ ಶಂಕರ್ ಅವರು ಮೂಕಾಂಬಿಕಾ ಅನ್ನಪ್ರಸಾದವನ್ನು 2002ರಲ್ಲಿ ಉದ್ಘಾಟಿಸಿದ್ದರು. ವಂಡ್ಸೆ ಪರಿಸರದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆಂಬುದನ್ನು ಮನಗಂಡು ನೆಂಪುವಿನಲ್ಲಿ ಮನೆ ಮಾಡಿ ಅಲ್ಲಿ ಪ್ರತೀವರ್ಷ 70 ಮಕ್ಕಳಿಗೆ ಉಚಿತ ಊಟ ವಸತಿಯನ್ನು ಸತತ 10 ವರ್ಷ ನೀಡಿದ್ದೇನೆ. ಹಾಗಿರುವಾಗ ನಾನು ಕೊಲ್ಲೂರು ದೇವಸ್ಥಾನದಿಂದ ಕೊಡುವ ಊಟಕ್ಕೆ ಏಕೆ ಅಡ್ಡಿ ಮಾಡುತ್ತೇನೆ. ಕೊಲ್ಲೂರು ದೇವಸ್ಥಾನದಿಂದ ಕಾಂಗ್ರೆಸ್ ಸಮಾವೇಶಕ್ಕೆ ಊಟ ಕೊಡಿಸಿದ್ದಾರೆ. ಈ ಸಂದರ್ಭ ಸಚಿವ ರೈ ಎಲ್ಲಿದ್ದರು ?ಚುನಾವಣಾ ಸಂದರ್ಭದಲ್ಲಿ ಇಂಥಹ ಚಿಲ್ಲರೆ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು ಎಂದರು.
2018 ಯುವ ಜನರ ವರ್ಷ. ಬೈಂದೂರು ಕ್ಷೇತ್ರದಾದ್ಯಂತ ನಮ್ಮದೇ ಪ್ರಾಬಲ್ಯವಿದೆ. ಕಾಂಗ್ರೆಸ್ ಸರ್ಕಾರದ ಹಿಂದು ದಮನಕಾರಿ ನೀತಿಯ ವಿರುದ್ದ ಜನ ರೊಚ್ಚಿಗೆದ್ದಿದ್ದಾರೆ. ಈಗಾಗಲೇ ದೇಶದ 22 ರಾಜ್ಯದಲ್ಲಿ ಬಿಜೆಪಿ ಬಂದಿದೆ. 2020 ರ ಹೊತ್ತಿಗೆ ಎಲ್ಲಾ ರಾಜ್ಯದಲ್ಲಿಯೂ ಬಿಜೆಪಿ ಆಡಳಿತ ಇರುತ್ತದೆ ಎಂದರು.
ಬೈಂದೂರು ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ, ಸಚಿವ ರಮಾನಾಥ ರೈ ಬುದ್ಧಿ ಭ್ರಮಣೆಗೆ ಒಳಗಾದವರ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸಿಗರು ಅವರನ್ನು ತಕ್ಷಣ ನಿಮ್ಹಾನ್ಸ್ಗೆ ದಾಖಲಿಸಲಿ. ಬಿ.ಎಮ್.ಸುಕುಮಾರ ಶೆಟ್ಟರು ಕಳೆದ 25 ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹವರೇ ಮಕ್ಕಳ ಊಟಕ್ಕೆ ಅಡ್ಡಿ ಮಾಡುವ ರೀತಿ ಸಲಹೆ ನೀಡಿದ್ದಾರೆ ಎನ್ನುವುದು ವ್ಯಂಗ್ಯವೋ, ಪೇಕ್ ನ್ಯೂಸ್ವೋ ಗೊತ್ತಿಲ್ಲ. ಇಂಥಹ ಸುಳ್ಳು ಆರೋಪಗಳು ಖಂಡನಾರ್ಹ ಎಂದರು.