ಮೂಡುಬಿದಿರೆ, ಮೇ : ವಾಷಿಂಗ್ ಮೆಷಿನ್ ಸ್ವಿಚ್ ಬಾಕ್ಸ್ ಗೆ ಕೈ ತಗಲಿದಾಗ ವಿದ್ಯುತ್ ಪ್ರವಹಿಸಿದ ಪರಿಣಾಮವಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಪಾಲಡ್ಕ ಗ್ರಾಂ.ಪಂ ನ ಗುಡ್ಡೆಯಂಗಡಿಯ ಮುರ್ಕತ್ ಪಲ್ಕೆಯಲ್ಲಿ ಬುಧವಾರ್ ಸಂಭವಿಸಿದೆ. ಪ್ರಸಿದ್ದ ತಾಸೆ ಕಲಾವಿದ ಅಣ್ಣಿ ಸುವರ್ಣ ಅವರ ಪತ್ನಿ ಮಾಲತಿ (54) ಮೃತ ಮಹಿಳೆ.
ಸಾಂದರ್ಭಿಕ ಚಿತ್ರ
ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆದಾದ ಬಳಿಕ ಯಂತ್ರದ ವಿದ್ಯುತ್ ಸಂಪರ್ಕ ಬಂದ್ ಮಾಡಲು ಮರೆತಿದ್ದ ಮಾಲತಿ ಸ್ವಲ್ಪ ಹೊತ್ತಿನ ಬಳಿಕ ಬಂದು ಸ್ವಿಚ್ ಬೋರ್ಡ್ ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ತಗಲಿ ಈ ಘಟನೆ ಸಂಭವಿಸಿದೆ. ಘಟನೆ ನಡೆದ ಸಂದರ್ಭ ಮನೆಯಲ್ಲಿ ಮನೆಮಂದಿ ಇದ್ದರೂ ಕೂಡಾ ಅವರೆಲ್ಲರೂ ಹಿಂದಿನ ರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರಣ ತಕ್ಷಣಕ್ಕೆ ಅರಿವಿಗೆ ಬರಲಿಲ್ಲ. ಮೊಬೈಲ್ ಕರೆಯಿಂದಾಗಿ ಎಚ್ಚರಗೊಂಡ ಮಾಲತಿ ಅವರ ಮಗ ತಾಯಿಯನ್ನು ಹುಡುಕಿಕೊಂಡು ಒಳಗಡೆ ಹೋದಾಗ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.