ಸುಳ್ಯ, ಮೇ 03: ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿ ಪಕ್ಷಕ್ಕೆ ಸಿದ್ದಭೂಮಿಕೆ ಅಲ್ಲ. ಇದು ಜಾತ್ಯಾತೀತ ಭೂಮಿ. ಕೋಮುವಾದದ ನೆಲ ಅಲ್ಲ. ಹಾಗಾಗಿ ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಬೆಳ್ಳಾರೆಯಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ 5 ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಭಿವೃದ್ದಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದೆ. ಈ ೫ ವರ್ಷಗಳ ಬುನಾದಿಯ ಮೇಲೆ ಮುಂದಿನ 5 ವರ್ಷಗಳ ಕಾಲ ಒಳ್ಳೆಯ ಸರಕಾರ ಕಾಂಗ್ರೆಸ್ ನೀಡಲಿದೆ. ಎಲ್ಲಾ ವರ್ಗದ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರಕಾರ ಕಾರ್ಯಕ್ರಮ ಮಾಡಿದೆ. ನೀರಾವರಿಗೆ ಹಣ ನೀಡಿಲ್ಲ ಎಂದು ಡಿ.ವಿ ಸದಾನಂದ ಗೌಡರು ಟೀಕಿಸಿದ್ದಾರೆ. ಬಿಜೆಪಿ ಸರಕಾರ ಇರುವಾಗ 16 ಸಾವಿರ ಕೋಟಿ ಮಾತ್ರ ನೀಡಿದೆ. ಈ ಮಾಹಿತಿ ಸದಾನಂದ ಗೌಡರಿಗೆ ತಿಳಿದಿಲ್ಲ ಎಂದು ಹೇಳಿದ ಅವರು ಮೋದಿ ನೇತೃತ್ವದ ಮೋದಿ ಸರಕಾರ 4 ವರ್ಷಗಳ ವರೆಗೆ ಯಾವ ಸಾಧನೆಯನ್ನು ಮಾಡಿಲ್ಲ. ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ ನರೇಂದ್ರ ಮೋದಿಯವರು ಸುಮಾರು 2 ಕೋಟಿ ಉದ್ಯೋಗ ಕಸಿದಿದ್ದಾರೆ. ಅವರ ಅಸಮರ್ಪಕ ಆಡಳಿತದಿಂದ ಸೋಲಿನ ಮೇಲೆ ಸೋಲಾಗುತ್ತಿದೆ. ಮೋದಿ ಮತ್ತು ಯೋಗಿ ವರ್ಚಸ್ಸು ಕುಗ್ಗುತ್ತಿದೆ. ಜೆಡಿಎಸ್ ಬಣ್ಣವೂ ಬಯಲಾಗಿದೆ. ಕುಮಾರಸ್ವಾಮಿ ಮತ್ತು ಅಮಿತ್ ಶಾ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಇದ್ದೇ ಮುಖ್ಯಮಂತ್ರಿಗಳು ಇದನ್ನು ಬಹಿರಂಗಗೊಳಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಯಾವ ಭಾಷೆಯಲ್ಲಿದೆ ಎಂದೇ ಗೊತ್ತಿಲ್ಲ ಎಂಬ ಡಿ.ವಿ.ಸದಾನಂದ ಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಮೊಯ್ಲಿಯವರು, ಪ್ರಣಾಳಿಕೆ ಕನ್ನಡದಲ್ಲೂ ಇದೆ, ಇಂಗ್ಲೀಷ್ನಲ್ಲೂ ಇದೆ. ಸದಾನಂದ ಗೌಡರಿಗೆ ಈ ಭಾಷೆಗಳು ಬರುವುದಿಲ್ಲವೇ? ಬೇಕಿದ್ದರೆ ಇನ್ನೊಂದು ಪ್ರತಿ ಕಳಿಸಿಕೊಡುವೆ ಎಂದು ಹೇಳಿದರು. ಪ್ರಣಾಳಿಕೆಯನ್ನು ಪಕ್ಷ ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಪಕ್ಷದ ಸಭೆಗಳಲ್ಲಿ, ಜಾಹೀರಾತುಗಳಲ್ಲಿ ಅದನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಅಭ್ಯರ್ಥಿ ಡಾ.ರಘು, ಕೆಪಿಸಿಸಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಎಂ. ವೆಂಕಪ್ಪ ಗೌಡ, ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಾಮತ್, ಉಸ್ತುವಾರಿ ವೇದನಾಥ ಸುವರ್ಣ, ವಕ್ಫ್ ಬೋರ್ಡ್ ಸದಸ್ಯ ಎಸ್.ಸಂಶುದ್ದೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಎಸ್.ಸಿ.ಘಟಕದ ಅಧ್ಯಕ್ಷೆ ಲಕ್ಷ್ಮೀ ಸುಬ್ರಹ್ಮಣ್ಯ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿ.ಕೆ.ಹಮೀದ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿದ್ದಿಕ್ ಕೊಕ್ಕೋ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ನಾಗರಾಜ್, ಪೆರುವಾಜೆ ಗ್ರಾ.ಪಂ.ಅಧ್ಯಕ್ಷೆ ಅನಸೂಯ ಉಪಸ್ಥಿತರಿದ್ದರು.