ಬೆಂಗಳೂರು, ಮೇ 02 : ಪ್ರಧಾನಿ ಮೋದಿ ನನ್ನನ್ನು ಹೊಗಳಿದ ಮಾತ್ರಕ್ಕೆ, ಅಥವಾ ನಾನು ಮೋದಿ ಬಗ್ಗೆ ಮೃದು ದೋರಣೆ ತಾಳಿದ ಮಾತ್ರಕ್ಕೆ ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮೈತ್ರಿ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ , ಜೆಡಿಎಸ್ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತದೆ ಎಂದರು. ಕಾಂಗ್ರೆಸ್ ನನ್ನನ್ನು ಅವಮಾನಿಸಿದೆ ಎಂದು ಮೋದಿ ಹೇಳಿದ್ದು ಅಕ್ಷರಶಃ ನಿಜ, ರಾಜಕೀಯ ಹಿನ್ನೆಲೆ ತಿಳಿದುಕೊಂಡು ಮಾತನಾಡುವ ಮೋದಿಯವರ ಬಗ್ಗೆ ನನಗೆ ಗೌರವವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಿಂದ ನನ್ನ ಭಾವಚಿತ್ರ ಕಿತ್ತು ಹಾಕಿಸಿ ಅವಮಾನ ಮಾಡಿದ್ದರು. ಇಂಥ ವಿಷಯಗಳನ್ನು ಮೋದಿ ಜನರ ಗಮನಕ್ಕೆ ತಂದಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ನನ್ನ ಪರ ಮಾತನಾಡಿದರು ಎಂದು ಬಿಜೆಪಿ ಜತೆ ಕೈಜೋಡಿಸಲ್ಲ ಎಂದು ಹೇಳಿದರು.
ನನಗೆ ಮೋದಿ ಬಗ್ಗೆಯೂ ಬೇಸರವಿದೆ . ಕಾರಣ ಮಹದಾಯಿ ವಿಚಾರಕ್ಕೆ ನಾಲ್ಕೈದು ಬಾರಿ ಮೋದಿ ಅವರನ್ನು ಭೇಟಿಯಾದಾಗ ನಾನು ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳುವ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ರಾಜಕೀಯದಲ್ಲಿ ನನಗೆ ಯಾರೂ ಶಾಶ್ವತ ಮಿತ್ರರೂ ಇಲ್ಲ. ಶತ್ರುಗಳೂ ಇಲ್ಲ. ಸ್ವಂತ ಶಕ್ತಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದೇನೆ ಎಂದು ತಿಳಿಸಿದರು.