ಬೆಳ್ತಂಗಡಿ, ಮೇ 2: ಅಪಾರ ಜನಸ್ತೋಮದ ನಡುವೆ ಮಾಜಿ ಸಚಿವ ಗಂಗಾಧರ ಗೌಡ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಈ ಮಧ್ಯೆ 2013 ರ ಚುನಾವಣೆಯಲ್ಲಿ ಬೆಳ್ತಂಗಡಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಂಜನ್ ಜಿ. ಗೌಡ ಬಿಜೆಪಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಅನ್ನುವ ಸುದ್ದಿ ಕೇಳಿ ಬಂದಿತ್ತು.
ಇದೀಗ ರಂಜನ್ ಜಿ. ಗೌಡ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಟಿಕೆಟ್ ಸಿಗದ ಹಿನ್ನಲೆ, ಮಾಜಿ ಸಚಿವ ಗಂಗಾಧರ ಗೌಡ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದಾರೆ. ರಂಜನ್ ಜಿ. ಗೌಡ ಮತ್ತು ಅವರ ತಂದೆ ಗಂಗಾಧರ ಗೌಡ ಕಳೆದ 4 ವರ್ಷಗಳಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಲಪಡಿಸಲು ಯುವಕರನ್ನು ಸಂಘಟಿಸಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದರು. ಆದರೆ ಈ ಬಾರಿ ರಂಜನ್ ಜಿ. ಗೌಡ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬದಲಾಗಿ ಯುವ ಮೋರ್ಚಾ ಮುಖಂಡ ನ್ಯಾಯವಾದಿ ಹರೀಶ್ ಪೂಂಜಾ ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿತ್ತು. ಬಿಜೆಪಿ ಪಕ್ಷದ ಈ ನಿರ್ಧಾರದಿಂದ ಗಂಗಾಧರ ಗೌಡ ಪಕ್ಷ ತೊರೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಡಿ.ಕೆ. ಶಿವಕುಮಾರ್ ಜೊತೆ ಮಾತುಕತೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಡಿಕೆಶಿ ಸಾರಥ್ಯದಲ್ಲಿ ಗಂಗಾಧರ ಗೌಡ ಕಾಂಗ್ರೆಸ್ ಸೇರಿದ್ದಾರೆ.