ಬೆಂಗಳೂರು, ಮೇ 02: ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಕೊರತೆ ಮತ್ತು ಜೀವ ಬೆದರಿಕೆ ಕಾರಣ ಶ್ರೀ ಕೃಷ್ಣ ಮಠಕ್ಕೆ ತೆರಳಲಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆಂದು ಮಂಗಳವಾರ ಎಂಜಿಎಂ ಮೈದಾನದಲ್ಲಿ ನಡೆದಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ಅಲ್ಲದೆ ಪ್ರಧಾನಿಯವರ ವೇಳಾಪಟ್ಟಿಯಲ್ಲಿಯೂ ಉಡುಪಿ ಮಠದ ಭೇಟಿ ಇರಲಿಲ್ಲ. ಮಠದಲ್ಲಿ ಎರಡು ದಿನಗಳಿಂದ ತಪಾಸಣೆ ನಡೆಸಿದ್ದಲ್ಲದೆ, ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಹೀಗಾಗಿ ಅವರು ಪ್ರಚಾರ ಭಾಷಣ ಮುಗಿಸಿ ಅಲ್ಲಿಗೆ ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೃಷ್ಣಮಠದಲ್ಲಿ ಪ್ರಧಾನಿ ಅವರಿಗೆ ಜೀವ ಬೆದರಿಕೆ ಇರುವ ಕಾರಣ ಅಲ್ಲಿಗೆ ಹೋಗುವುದು ಸೂಕ್ತವಲ್ಲ ಎಂದು ಎಸ್ಪಿಜಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದರು.
ಪ್ರಧಾನಿಯಾಗಿ ಭದ್ರತಾ ಸುರಕ್ಷತೆಗಳನ್ನು ಪಾಲಿಸಬೇಕಾಗಿರುವುದರಿಂದ ಅವರು ಮಠಕ್ಕೆ ಭೇಟಿ ನೀಡಲಿಲ್ಲ ಎಂದು ಶೋಭಾ ಕರಂದ್ಲಾಜೆ ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರಂದ್ಲಾಜೆ ತಿಳಿಸಿದರು.
ಮಠಕ್ಕೆ ಭೇಟಿ ನೀಡಲು ಸಾಧ್ಯವಾಗದೆ ಇರುವುದರ ಬಗ್ಗೆ ಮೋದಿ ಅವರಲ್ಲಿ ಬೇಸರವಿದೆ ಎಂದು ಅವರು ತಿಳಿಸಿದರು. ಅಲ್ಲಿನ ಮಠಾಧೀಶರುಗಳು ಆತ್ಮೀಯರು. ಈ ಹಿಂದೆ ಹಲವು ಸಲ ಭೇಟಿ ನೀಡಿದ್ದೇನೆ. ಆದರೆ, ಭದ್ರತಾ ಕಾರಣದಿಂದ ಹೋಗುವಂತಿಲ್ಲ ಎಂದು ಮೋದಿ ಅವರು ತಮ್ಮಲ್ಲಿ ಹೇಳಿದ್ದು, ಅಲ್ಲದೆ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗದಕ್ಕೆ ಪ್ರಧಾನಿ ಬೇಸರ ವ್ಯಕ್ತಪಡಿಸಿದರು ಎಂದು ಕರಂದ್ಲಾಜೆ ತಿಳಿಸಿದರು.