ಮಂಗಳೂರು, ಮೇ 2: ಕರಾವಳಿಯ ಅಪ್ರತಿಮ ಚಿತ್ರ ಕಲಾವಿದೆ ಶಬರಿ ಗಾಣಿಗಾ ಬೆಹರೈನ್ ರಾಜ ಅಹ್ಮದ್ ಬಿನ್ ಇಸಾ ಅಲ್ ಖಲೀಫಾ ಅವರ ಚಿತ್ರ ಬಿಡಿಸಿ ವಿದೇಶದಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಬೆಹರೈನ್ ನಲ್ಲಿ ಕನ್ನಡ ಸಂಘ ಆಯೋಜಿಸಿದ್ದ ವಸಂತೋತ್ಸವ ಕಾರ್ಯಕ್ರಮದಲ್ಲಿ ಕರಾವಳಿಯ ಅಪ್ರತಿಮ ಚಿತ್ರ ಕಲಾವಿದೆ ಶಬರಿ ಗಾಣಿಗ ಭಾಗವಹಿಸಿದ್ದರು. ಏ.27ರಂದು ಬೆಹರೈನ್ ಮನಮಾದ ಗುದೇಬಿಯಾದ ಇಂಡಿಯನ್ ಕ್ಲಬ್ ನಲ್ಲಿ ಈ ವಸಂತೋತ್ಸವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶಬರಿ ಗಾಣಿಗಾ ಬೆಹರೈನ್ ರಾಜ ಅಹ್ಮದ್ ಬಿನ್ ಇಸಾ ಅಲ್ ಖಲೀಫಾ ಅವರ ಚಿತ್ರವನ್ನು ಕ್ಷಣ ಮಾತ್ರದಲ್ಲೇ ಬಿಡಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಳಿಕ ಚಿತ್ರವನ್ನು ಬೆಹರೈನ್ ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಹೈಥಮ್ ಸೇಲಂ ಅವರಿಗೆ ಹಸ್ತಾಂತರಿಸಲಾಯಿತು.
ಸಂಗೀತ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡಿರುವ ಶಬರಿ ಗಾಣಿಗಾ ವಿದೇಶದ ನೆಲದಲ್ಲಿ ಹಮ್ಮಿಕೊಂಡಿದ್ದ ವಸಂತೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರಗೀತೆಯ ಹಾಡು, ಭಾವಗೀತೆಗಳನ್ನು ಹಾಡಿದ್ದು ಪ್ರಶಂಸೆ ಪಡೆದುಕೊಂಡಿದ್ದಾರೆ.
ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹುಟ್ಟಿಕೊಂಡ ಈ ಸಂಸ್ಥೆಯು ಹಲವಾರು ವರುಷಗಳಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸಿದೆ. ಇದೀಗ ನಮ್ಮ ರಾಜ್ಯದ ಆಚಾರ, ವಿಚಾರ, ಕಲೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲಿಯೂ ಪಸರಿಸುವ ಉದ್ದೇಶದಿಂದ ಈ ವಸಂತೋತ್ಸವ ಕಾರ್ಯಕ್ರಮವನ್ನು ಬೆಹರೈನ್ ನಲ್ಲಿ ಆಯೋಜಿಸಲಾಗಿತ್ತು.
ರಾಜ್ಯದ ವೇಗದ ಚಿತ್ರ ಬಿಡಿಸುವ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಬರಿ ಗಾಣಿಗ ಸಂಗೀತ, ಕ್ರಾಫ್ಟ್, ಚಿತ್ರಕಲೆ, ರಂಗೋಲಿ, ಕೀಬೋರ್ಡ್ ಹೀಗೆ ಎಲ್ಲಾ ಕಲೆಗಳನ್ನು ತನ್ನೊಳಗೆ ಹುದುಗಿಕೊಂಡ ವಿಶೇಷ ಪ್ರತಿಭೆ. ಈ ಕಲಾಚತುರೆ ಬರೀ ಮೂರು ನಿಮಿಷದಲ್ಲಿ ಪೇಂಟಿಂಗ್ ಮಾಡುತ್ತಾಳೆ. ವಿನೂತನ ಕೈಚಳಕದ ಮೂಲಕ ಇಡೀ ದೇಶದಲ್ಲೇ ಅತ್ಯಂತ ವೇಗದಿಂದ ಚಿತ್ರ ಬಿಡಿಸುವ ಮೊದಲ ಮಹಿಳಾ ಚಿತ್ರಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಗಳೂರಿನ ಈ ಕಲಾಚತುರೆ ಬಿ. ಯೋಗೀಶ್ ಕುಮಾರ್ ಗಾಣಿಗ ಮತ್ತು ಎಂ. ಶಶಿಕಲಾ ದಂಪತಿಯ ಪುತ್ರಿ. ಶಬರಿ ಬಾಲ್ಯದಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಇದೀಗ ತಮ್ಮ ಪ್ರತಿಭೆಯನ್ನು ವಿದೇಶದಲ್ಲಿಯೂ ಪಸರಿಸಿ ಕರಾವಳಿಯ ಕಂಪನ್ನು ಎಲ್ಲೆಡೆ ಪಸರಿಸಿದ್ದಾರೆ.