ಕಾಪು, ಮೇ 01: ಕಾಪು ವಿಧಾನ ಸಭಾ ಕ್ಷೇತ್ರ ಭೌಗೋಳಿಕವಾಗಿ ಅತೀ ದೊಡ್ಡ ಕ್ಷೇತ್ರ. ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನಾಂಗದೊಂದಿಗೆ ವಿವಿಧ ಜಾತಿ ಪಂಗಡಗಳನ್ನೊಳಗೊಂಡು ಈ ಬಾರಿ ಮತದಾರರ ಒಲವು ಎತ್ತ ಕಡೆ ಇದೆ ಎಂದು ಊಹಿಸಲಸಾಧ್ಯವಾಗಿದೆ.
ಒಂದೊಮ್ಮೆ ಕಾಂಗ್ರೆಸ್ ಕೈ ಯಲ್ಲಿದ್ದ ಕ್ಷೇತ್ರ ಎರಡು ಬಾರಿ ಬಿಜೆಪಿ ಪರವಾಗಿತ್ತು. ಹಿಂದಿನ ಬಾರಿ ಲಾಲಾಜಿ ಮೆಂಡನ್ ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ವಿನಯಕುಮಾರ್ ಸೊರಕೆ ವಿರುದ್ಧ ಅತೀ ಕಡಿಮೆ ಅಂದರೆ 1400 ಮತಗಳ ಅಂತರದಲ್ಲಿ ಸೋತಿದ್ದರು. ವಿನಯ ಸೊರಕೆಯವರು ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು. ಕಾಪು ಪುರಸಭೆಯಾಗಿ ಅಲ್ಲದೆ ತಾಲೂಕು ಕೇಂದ್ರವನ್ನಾಗಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಏನಿದ್ದರೂ ಈ ಬಾರಿ ಜಿದ್ದಾ ಜಿದ್ದಿ ಕ್ಷೇತ್ರವಾಗಿ ಎರಡೂ ಪಕ್ಷಗಳು ಸಮಬಲದಂತೆ ಕಾಣುತ್ತಿದೆ.
ಕಾಪು ಕ್ಷೇತ್ರದಲ್ಲಿ ಯುಪಿ.ಸಿ ಎಲ್,ಸಜ್ಲಾನ್,ಐ.ಎಸ್.ಪಿಆರ್.ಎಲ್ ಮುಂತಾದ ದೊಡ್ಡ ಕೈಗಾರಿಕಾ ಕಂಪನಿಗಳು ತಳವೂರಿದ್ದಲ್ಲದೆ ಎರಡು ಕೈಗಾರಿಕಾ ವಲಯ ಸ್ಥಾಪನೆಯಾಗಿದೆ. ಆದರೆ ನೆನೆಗುದಿಗೆ ಬಿದ್ದ ಬಹುಪಯೋಗಿ ಬಂದರು ಭಾಗ್ಯ ಜನತೆಗೆ ಲಭಿಸಿಲ್ಲ.
ಮೂರು ಮಾರಿಗುಡಿ ಸೇರಿ ಎಲ್ಲಾ ಸಮುದಾಯದ ಆರಾಧ್ಯ ಕೇಂದ್ರಗಳಿದ್ದ ಕಾಪು ಪ್ರವಾಸೋಧ್ಯಮಕ್ಕೆ ಹೆಚ್ಚಿನ ಒತ್ತು ಕೊಟ್ಟು ಜಗತ್ಪ್ರಸಿದ್ಧವಾಗಿದೆ. ಈ ಬಾರಿ ಜಯದ ಮಾಲೆ ಯಾರ ಕೊರಳಿಗೆ ಬೀಳಬಹುದು. ಎರಡೂ ಪಕ್ಷದವರು ತಮ್ಮದೇ ಜಯ ಅಂತಾರೆ. ಏನಿದ್ದರೂ ಮೇ.12 ಮುಗಿದು 15 ರ ಫಲಿತಾಂಶ ಬಂದರೆ ತಿಳಿಯಬಹುದು.