ಕಲಬುರ್ಗಿ, ಮೇ 01: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಂಡ ಬಳಿಕ ವಾತಾವರಣ ಬದಲಾಗುತ್ತದೆ ಎಂದು ಹೇಳುವ ಬಿಜೆಪಿ , ಅವರನ್ನು ಕರ್ನಾಟಕ ಸಿಎಂ ಮಾಡ್ತಾರಾ ಎಂದು ಲೇವಡಿ ಮಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೋದಿ ಭೇಟಿಯಿಂದ ರಾಜ್ಯದ ದಿಕ್ಸೂಚಿ ಬದಲಾಗುವುದಿಲ್ಲ, ರಾಜ್ಯದಲ್ಲಿ ಬಿಜೆಪಿ ದುರ್ಬಲವಾಗಿದೆ ಇದಕ್ಕಾಗಿ ಮೋದಿ ಟಾನಿಕ್ ಅನಿವಾರ್ಯವಾಗಿದೆ. ಬಿಜೆಪಿಯಲ್ಲಿ ಸಿಎಂ ಆದವರೇ ಜೈಲಿಗೆ ಹೋಗಿ ಬಂದಿದ್ದಾರೆ. ಮೋದಿ ಇಲ್ಲಿಗೆ ಬರೋದು ಭಾಯಿಯೋಂ ಬೆಹೆನೋ ಎಂದು ಹೇಳಿ ಹೋಗಲಷ್ಟೇ ಎಂದು ವ್ಯಂಗ್ಯವಾಡಿದರು.
ಮೋದಿ ಅವರಿಂದ ಕರ್ನಾಟಕಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ಅವರು ರಾಜ್ಯದ ಜನರಿಗೆ ಉದ್ಯೋಗ ಅಥವಾ ಆರ್ಥಿಕ ನೆರವು ನೀಡಿದ್ದಾರೆಯೇ? ಯಾವ ಯೋಜನೆಗೂ ನಯಾಪೈಸೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.