ಮಂಗಳೂರು, ಏ 29: ಬಿಲ್ಲವ ಸಮುದಾಯಕ್ಕೆ ಹರಿಕೃಷ್ಣ ಬಂಟ್ವಾಳ್ ನೀಡಿದ ಕೊಡುಗೆ ಏನು ಎಂದು ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ. ಏ.29ರ ಭಾನುವಾರ ನಗರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಬಂಟ್ವಾಳ್ ಆರೋಪಗಳಿಗೆ ಪ್ರತಿದಾಳಿ ನಡೆಸಿ ಮಾತನಾಡಿದ ಅವರು ಹರಿಕೃಷ್ಣ ಬಂಟ್ವಾಳ್ ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಬಾಲಕಿಯ ಅತ್ಯಾಚಾರ ಪ್ರಕರಣವೊಂದರಲ್ಲಿ ದಿಲ್ಲಿಯ ಮದ್ರಸವೊಂದರ ಅಧ್ಯಾಪಕನ ಪಾತ್ರವನ್ನು ಖಂಡಿಸಿ ಮೇ 1ರಂದು ಸುರತ್ಕಲ್ನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದ ಅವರು ಮಹಿಳೆಯರ ಮೇಲೆ ಯಾರೇ ದೌರ್ಜನ್ಯ ಎಸಗಿದರೂ ಅದು ಖಂಡನೀಯ. ಅದರಲ್ಲಿ ಜಾತಿಮತ ಭೇದವಿಲ್ಲ ಎಂದರು. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆಯಾಗಲಿ, ಬಿಜೆಪಿಯಾಗಲಿ, ಇದುವರೆಗೆ ದ್ವನಿ ಎತ್ತದೆ ಇರುವುದು ವಿಪರ್ಯಾಸ ಎಂದರು.
ಬಳಿಕ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ವಿರುದ್ದ ಕಿಡಿಕಾರಿದ ಅವರು, ನಾನು ದನದ ಜೊತೆ ನಿಂತು ಪೋಟೋ ತೆಗೆಸಿದ್ದನ್ನೂ ಕೂಡ ನೆಪವಾಗಿಸಿ ಜಾಲತಾಣದಲ್ಲಿ ಪ್ರಶ್ನಿಸಿ ತನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋ ಮಾತೆಯನ್ನು ಪೂಜಿಸುವ ನಾನು ಅದಕ್ಕಾಗಿಯೇ ಗೋವಿನ ಜತೆ ಪೋಟೋ ತೆಗೆದಿದ್ದೆ. ಇದನ್ನು ಫೇಸ್ಬುಕ್ ನಲ್ಲಿ ಹಾಗೂ ಇತರ ಸಾಮಾಜಿಕ ಜಾಲತಾಣದಲ್ಲ್ಲಿ ಹಾಕಿದ್ದೆ ಆದರೆ ಇದನ್ನು ಅರಗಿಸಿಕೊಳ್ಳಲಾಗದ ಒಂದಿಷ್ಟು ಮಂದಿ ತನ್ನನ್ನು ದನ ಕೊಲ್ಲುವವರು ಎಂದು ಜರೆದಿದ್ದಾರೆ. ನನ್ನ ಬುರ್ಖಾ ಕಳೆದು ಹೋಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ನನ್ನ ತೇಜೋವಧೆ ಮಾಡುವವರ ವಿರುದ್ದ ಪೊಲೀಸರಿಗೆ ದೂರು ನೀಡದೆ, ನಾನೇ ಅವರಿಗೆ ಸಾಮಾಜಿಕ ಜಾಲತಾಣದಲ್ಲೇ ತಕ್ಕ ಉತ್ತರ ನೀಡುತ್ತಿದ್ದೇನೆ ಎಂದು ಖಾರವಾಗಿ ಹೇಳಿದ್ದಾರೆ.
ಇದೇ ವೇಳೆ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಮೇಯರ್ಗಳಾದ ಗುಲ್ಝಾರ್ ಬಾನು, ಜೆಸಿಂತಾ ವಿಜಯ ಆಲ್ಫ್ರೆಡ್, ನಾಗವೇಣಿ, ವಿಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.