ಉಡುಪಿ, ಏ.29: ಮೇ 1 ರಂದು ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಚುನಾವಣಾ ಪ್ರಚಾರ ಕಾರ್ಯಕ್ರಮದ ಹಿನ್ನಲೆಯಲ್ಲಿ ಪೆಂಡಲ್ ಹಾಕಲು ಸಾಮಾಗ್ರಿಗಳನ್ನು ಸಾಗಾಟ ಮಾಡ್ತಾ ಇದ್ದ, ಟೆಂಪೊ ಅಪಘಾತಕ್ಕೀಡಾಗಿ, ಮೂವರು ಕಾರ್ಮಿಕರು ಸಾವನಪ್ಪಿದ್ದ ಘಟನೆ ಏ. 29ರ ಭಾನುವಾರ ಬೆಳಗ್ಗೆ ಪೆರ್ಡೂರು ಸಮೀಪ ನಡೆದಿದೆ. ಮೃತರನ್ನು ಅಸ್ಸಾಂ ಮೂಲದ ಕಾರ್ಮಿಕರೆಂದು ಗುರುತಿಸಲಾಗಿದ್ದು ಅವರ ಉಳಿದ ವಿವರಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ಹಿನ್ನಲೆಯಲ್ಲಿ, ಚಿತ್ರದುರ್ಗದಿಂದ ಪೆಂಡಲ್ ಸಾಗಾಟ ಮಾಡುತ್ತಿದ್ದು, ಈ ಸಂದರ್ಭ ಟೆಂಪೊ ಚಾಲಕನ ನಿರ್ಲಕ್ಷದಿಂದ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಉರುಳಿಬಿದ್ದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾಗಿ ಉರುಳಿದ ರಭಸಕ್ಕೆ, ಟೆಂಪೋದಲ್ಲಿದ್ದ 10-12 ಕಾರ್ಮಿಕರ ಪೈಕಿ ಓರ್ವ ಸ್ಥಳದಲ್ಲೇ ಸಾವನಪ್ಪಿ, ಇನ್ನಿಬ್ಬರು ಆಸ್ಪತ್ರೆ ಸಾಗಿಸುವ ದಾರಿಮಧ್ಯೆ ಸಾವನಪ್ಪಿದ್ದಾರೆನ್ನಲಾಗಿದೆ. ಗಾಯಗೊಂಡ ಉಳಿದ ಕಾರ್ಮಿಕರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.