ಬಂಟ್ವಾಳ, ಏ 28: ಆರ್ಎಸ್ಎಸ್ ಹೇಳಿದಂತೆ ಕೇಳುವ ಪಕ್ಷ ಬಿಜೆಪಿಯಾಗಿದ್ದು, ಈ ಪಕ್ಷಕ್ಕೆ ಸಿದ್ಧಾಂತ ಎಂಬುದೇ ಇಲ್ಲ ಎಂದು ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಇತ್ತೀಚೆಗೆ ಪಕ್ಷದ ರಾಜ್ಯ ನಾಯಕರೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ವೇಳೆ ಮೋದಿಯವರು ನನಗೆ ಕನ್ನಡ ಇಷ್ಟ ಅಂತ ಹೇಳಿದ್ದರು. ಚುನಾವಣೆ ನಡೆದ ಬಳಿಕ ಮೋದಿ ನಿರುದ್ಯೋಗಿ ಆಗುತ್ತಾರೆ. ಆ ನಂತರ ಅವರು ಕರ್ನಾಟಕಕ್ಕೆ ಬರಲಿ. ಇಲ್ಲಿಗೆ ಬಂದು ಮೋದಿ ಕನ್ನಡ ಕಲಿಯಲಿ. ಆದರೆ, ಶಾಲಾ ಮಕ್ಕಳ ಜೊತೆ ಸೇರಿಕೊಂಡು ಕನ್ನಡ ಕಲಿಯುವುದು ಬೇಡ. ಶಾಲಾ ಮಕ್ಕಳ ಜೊತೆಗೆ ನಿಮಗೆ ಸ್ಥಾನ ಇಲ್ಲ. ವಯಸ್ಕರ ಶಿಕ್ಷಣ ಕೇಂದ್ರಕ್ಕೆ ಸೇರಿ ಕನ್ನಡ ಕಲಿಯಲಿ. ಪ್ರಧಾನಿ ಮೋದಿಗೆ ಮತಿ ಭ್ರಮಣೆಯಾಗಿದೆ. ನಿಮಗೆ ತೀಟೆ ತೀರಿಸೋಕೆ ಕರ್ನಾಟಕ ಬೇಕು ಎಂದು ಹೇಳಿಕೆ ನೀಡಿದ್ದಾರೆ.
ಅತ್ಯಾಚಾರಿಗಳನ್ನು ಬೆಂಬಲಿಸುವ ಪಕ್ಷ ಬಿಜೆಪಿ. ಹಿಂದೂ ಧರ್ಮವನ್ನು ಯಾರೂ ಗುತ್ತಿಗೆ ಪಡೆದುಕೊಂಡಿಲ್ಲ. ಅಮಿತ್ ಶಾ ಕಾಲಿಗೆ ಯಡಿಯೂರಪ್ಪ ಬಿದ್ದಿದ್ದಾರೆ. ಅಮಿತ್ ಶಾ ವಯಸ್ಸು ಎಷ್ಟು..? ಯಡಿಯೂರಪ್ಪ ವಯಸ್ಸು ಎಷ್ಟು..? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಬೆದರು ಗೊಂಬೆಗಳ ತರ ಇದ್ದಾರೆ. ದೇಶದ ಜನತೆಗೆ ಅಭಿವೃದ್ಧಿ ವಿಚಾರದ ಬಗ್ಗೆ ಹೇಳಿ. ಆದರೆ ಸುಳ್ಳು ಹೇಳಬೇಡಿ. ಸುಳ್ಳನ್ನೇ ಹೇಳುವ ಜಾಯಾಮಾನದವರು ನೀವು ಎಂದು ಬಿಜೆಪಿ ವಿರುದ್ಧ ವಗ್ದಾಳಿ ನಡೆಸಿದರು.