ಬಂಟ್ವಾಳ, ಎ. 27: ಪ್ರಧಾನಿ ಮೋದಿ ಅವರು ಎಲ್ಲೇ ಹೋದರೂ ತಮ್ಮ ಮನ್ಕಿ ಬಾತ್ ಅನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮಗೆ ಕರ್ನಾಟಕ ಜನರ ಮಾತುಗಳೆ "ಮನ್ ಕಿ ಬಾತ್" ಆಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಶುಕ್ರವಾರ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ನ ಗೋಲ್ಡನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಪ್ರಚಾರ ಹಾಗೂ ಕಾರ್ಯಕರ್ತ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿ, ನಾವು ವಚನ ಭ್ರಷ್ಟರಲ್ಲ. ಈ ಹಿಂದೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುವುದಾಗಿ ಮೋದಿ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಇಂತಹ ಯಾವುದೇ ಹೇಳಿಕೆಗಳಿಗೆ ಜನರು ಮರುಳಾಗುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಿಳಿಸಿದರು.
ದೇಶದಲ್ಲಿ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಎಂಎಲ್ಎಯಿಂದಲೇ ಅತ್ಯಾಚಾರ ನಡೆದಿದೆ. ಕಾಶ್ಮೀರ ಸಹಿತ ದೇಶದ ವಿವಿಧ ಕಡೆಗಳಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದ್ದರೂ ಬೇಟಿ ಬಚಾವೋ ಎನ್ನುತ್ತಿರುವ ಮೋದಿ ಮೌನ ವಹಿಸಿದ್ದಾರೆ. ಮೊದಲು ತಮ್ಮ ಪಕ್ಷದ ನಾಯಕರಿಂದ ಬೇಟಿಯನ್ನು ರಕ್ಷಣೆ ಮಾಡಲಿ ಎಂದು ವ್ಯಂಗ್ಯವಾಡಿದರು.
ಮೋದಿ ಅವರು ಬಸವಣ್ಣ ಅವರ ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಹಿಂದಿನಿಂದ ಭ್ರಷ್ಟ ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ರಾಜ್ಯವನ್ನು ಊಟಿ ಮಾಡಿದ ರೆಡ್ಡಿ ಬ್ರದರ್ಸ್ ಹಾಗೂ ಜೈಲಿಗೆ ಹೋಗಿ ಬಂದವರಿಗೆಲ್ಲ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಮೋದಿ ಅವರು ಮೊದಲು ಬಸವಣ್ಣ ಅವರ ಪುಸ್ತಕಗಳನ್ನು ಓದುವ ಮೂಲಕ ಅವರು ಹೇಳಿರುವ ಆದರ್ಶಗಳನ್ನು ತಿಳಿದುಕೊಳ್ಳಲಿ ಎಂದ ಅವರು, ಮೋದಿ ಅವರು ಚೈನಾ ಪ್ರವಾಸದಲ್ಲಿ ಡೋಕ್ಲಾ ವಿಷಯದ ಬಗ್ಗೆ ಒಂದೇ ಒಂದು ಮಾತು ಆಡಲಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ದ.ಕ ಹಾಗೂ ಉಡುಪಿ ಜಿಲ್ಲೆಯ ಜನರು ರಾಜಕೀಯವಾಗಿ ಪ್ರಜ್ಞಾವಂತರು ಹಾಗೂ ಸಾಹಸ ಪ್ರವತ್ತಿಯನ್ನು ಹೊಂದಿದವರು. ಕಳೆದ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜಾತ್ಯತೀತ ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಬಾರಿಯೂ 8 ಕ್ಷೇತ್ರಗಳಲ್ಲಿಯೂ ಗೆಲ್ಲುವ ಮೂಲಕ ಕೋಮುವಾದಿ ಬಿಜೆಪಿ ಪಕ್ಷವನ್ನು ಕಿತ್ತೊಗೆಯಬೇಕಿದೆ. ಮೂರು ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಗಳಿಸಬೇಕು ಎಂದು ಹೇಳಿದರು.
ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಹಾಗೂ ಜಾತಿ ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತುವುದೇ ಬಿಜೆಪಿಯ ಸಾಧನೆ ಎಂದ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ಸುಮಾರು 1 ಲಕ್ಷ ಕೋಟಿ ರೂ.ವನ್ನು ಲೂಟಿ ಮಾಡಲಾಗಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕವನ್ನು ಕೊಳ್ಳೆ ಹೊಡೆಯಲು ಭ್ರಷ್ಟರೆಲ್ಲರೂ ಒಂದಾಗಿದ್ದಾರೆ ಎಂದು ಹೇಳಿದರು.
ಪೂರ್ವದಲ್ಲಿ ಸೂರ್ಯ ಹುಟ್ಟವುದು ಎಷ್ಟು ಸತ್ಯವೋ, ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಇದು ದೇಶದ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಕೊಟ್ಟ ಮಾತನ್ನು ತಪ್ಪದೇ ಪಾಲಿಸುವ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಹೇಳಲು ಹೆಮ್ಮೆಯಾಗುತ್ತದೆ. ರಾಜ್ಯದ ಜನರಿಗೆ ಮತ್ತೊಮ್ಮೆ ವಚನ ಕೊಡುತ್ತೇನೆ, ಇದಾಗಲೇ ಬಿಡುಗಡೆ ಮಾಡಿದ ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಮುಂದೆಯೂ ಕೂಡಾ ಶೇ. 100ರಷ್ಟು ಈಡೇಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ರಮಾನಾಥ ರೈ, ಶಕುಂತಳಾ ಶೆಟ್ಟಿ, ಯು.ಟಿ.ಖಾದರ್, ರಘು ಸುಳ್ಯ, ಜೆ.ಆರ್.ಲೋಬೊ, ಮೊಯ್ದೀನ್ ಬಾವ ಅವರು ವಿಶೇಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.