ಉಳ್ಳಾಲ, ಸೆ22: ತೊಕ್ಕೊಟ್ಟಿನ ಬಾರ್ ಮಾಲಕನಿಗೆ ರಿವಾಲ್ವರ್ ತೋರಿಸಿ ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ನೌಶಾದ್ ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಪೆರ್ಮುದೆ ಪಳ್ಳಂ ಹೌಸ್ ನ ಬಂದ್ಯೋಡು ನಿವಾಸಿಯಾಗಿರುವ ನೌಶಾದ್ ಭೂಗತ ಪಾತಕಿ ಕಲಿ ಯೋಗೀಶ್ ನ ಸಹಚರನಾಗಿದ್ದು, ಈತನ ವಿರುದ್ಧ ಹಲವಾರು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 3ರಂದು ಘಟನೆ ನಡೆದಿದ್ದು, ಬಂದ್ಯೋಡು ಮುಟ್ಟ ಗೇಟ್ ಬಳಿಯ ಶ್ರೀಧರ ಶೆಟ್ಟಿ ಎಂಬವರ ಮನೆಗೆ ನುಗ್ಗಿದ ಏಳು ಮಂದಿಯ ತಂಡವು ರಿವಾಲ್ವರ್ ತೋರಿಸಿ ಒಂದು ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದರು. ಒಂದುವೇಳೆ ಹಣ ನೀಡದಿದ್ದಲ್ಲಿ ಕೊಲ್ಲುವುದಾಗಿ ಶ್ರೀಧರ ಶೆಟ್ಟಿ ಅವರಿಗೆ ಧಮ್ಕಿ ಕೂಡ ಹಾಕಿದ್ದರು.
ಶ್ರೀಧರ ಶೆಟ್ಟಿ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದು, ಮನೆಯ ಸಿಸಿಟಿವಿ ಕ್ಯಾಮರಾದಿಂದ ಲಭಿಸಿದ ದೃಶ್ಯವನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಆರೋಪಿಗಳ ಸುಳಿವು ಲಭಿಸಿತ್ತು. ಕಲಿ ಯೋಗೀಶ್ ನೇತೃತ್ವದ ತಂಡವು ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದುಬಂದಿತ್ತು. ಇದರಂತೆ ಕಲಿ ಯೋಗೀಶ್ ಪ್ರಕರಣದ ಪ್ರಥಮ ಆರೋಪಿಯಾಗಿದ್ದು, ಬಂಧನಕ್ಕೆ ಒಳಗಾಗಿರುವ ನೌಶಾದ್ ಐದನೇ ಆರೋಪಿಯಾಗಿದ್ದಾನೆ.