ಬೆಂಗಳೂರು, ಏ 27: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅನುಮಾನಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ದೆಹಲಿಯಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ ವಿಮಾನದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಕಾಂಗ್ರೆಸ್ ಪೊಲೀಸರ ಬಳಿ ದೂರು ದಾಖಲಿಸಿದೆ. ಕರ್ನಾಟಕ ಪೊಲೀಸ್ ಮುಖ್ಯಸ್ಥೆ ನೀಲಮಣಿ ಎನ್ ರಾಜು ಅವರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ರಾಹುಲ್ ಗಾಂಧಿ ಕಚೇರಿಯಿಂದ ನೀಡಿದ ದೂರಿನ ಪ್ರಕಾರ, ಹಲವು ವಿವರಿಸಲಾಗದ ತಾಂತ್ರಿಕ ದೋಷಗಳು ಎರಡೂವರೆ ಗಂಟೆಗಳ ವಿಮಾನ ಪ್ರಯಾಣದ ಸಂದರ್ಭದಲ್ಲಿ ಸಂಭವಿಸಿದೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಉದ್ದೇಶಪೂರ್ವಕವಾಗಿ ವಿಮಾನದಲ್ಲಿ ಹೀಗೆ ಮಾಡಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಹುಲ್ ಪ್ರಯಾಣ ಮಾಡುತ್ತಿದ್ದ ವಿಮಾನವು ವಿಪರೀತ ಹೊಯ್ದಾಡಿದೆ. ಮಾತ್ರವಲ್ಲ ಒಂದು ಕಡೆಗೆ ವಾಲಿಕೊಂಡು, ವಿಪರೀತ ಶಬ್ದ ಮಾಡಿದೆ. ಆಟೋಪೈಲಟ್ ಸಿಸ್ಟಮ್ ವಿಮಾನದಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿದೆ.
ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ, ಒತ್ತಡಕ್ಕೆ, ಜೀವಭಯಕ್ಕೆ ಒಳಗಾಗಿದ್ದರು. ಆದರೆ ಇದು ವಿರಳ ಸಂದರ್ಭದಲ್ಲಿ ಆಗುವಂಥ ಘಟನೆ ಎಂದು ವಿಮಾನ ಸಿಬ್ಬಂದಿ ತಿಳಿಸಿದ್ದಾರೆ. ಖಾಸಗಿ ವಿಮಾನದ ಪೈಲಟ್ ಮತ್ತು ವಿಮಾನ ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನೀಡಿರುವ ಈ ದೂರನ್ನು ನಾಗರಿಕ ವಿಮಾನಯಾನದ ಡೈರೆಕ್ಟರ್ ಜನರ್ ಅವರಿಗೆ ಮುಂದಿನ ವಿಚಾರಣೆಗಾಗಿ ಹಸ್ತಾಂತರಿಸುವ ಸಾಧ್ಯತೆ ಇದೆ.