ಮಂಗಳೂರು, ಏ 26 : ಮಂಗಳೂರು ಉತ್ತರ ಕ್ಷೇತ್ರದಿಂದ ಕೃಷ್ಣ ಜೆ ಪಾಲೆಮಾರ್ ಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಕ್ಷತ್ರಿಯ ಒಕ್ಕೂಟ, ಪಾಲೆಮಾರ್ ಅವರಿಗೆ ನ್ಯಾಯ ಸಿಗುವ ತನಕ ತಟಸ್ಥ ನೀತಿ ಅನುಸರಿಸಲು ನಿರ್ಧರಿಸಿದೆ. ಈ ಬಗ್ಗೆ ಏಪ್ರಿಲ್ 26 ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಕೃಷ್ಣಾನಂದ ರಾವ್, ಭಾರತೀಯ ಜನತಾ ಪಾರ್ಟಿಯಿಂದ ಪಾಲೆಮಾರ್ ಅವರಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿ ಹೋಗಿರುವುದು ಅಘಾತಕಾರಿ ಸಂಗತಿಯಾಗಿದ್ದು, ಇದು ಹಿಂದುಳಿದ ವರ್ಗಕ್ಕೆ ಮಾಡಿದ ಮೋಸ ಆಗಿದೆ.
ಪಾಲೆಮಾರ್ ಅವರಿಗೆ ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸುವ ಶಕ್ತಿ ಇದ್ದು, ಅವರ ಅಧಿಕಾರವಧಿಯಲ್ಲಿ ಕೋಮು ಗಲಭೆ, ಅಹಿತಕರ ಘಟನೆ ನಡೆಯದಂತೆ ಸಮರ್ಥವಾಗಿ ನಿಭಾಯಿಸಿದ್ದರು. ಅಭಿವೃದ್ಧಿಯ ಪರ ಕೆಲಸ ಮಾಡಿದ್ದರು. ಆದರೆ ಇದೀಗ ಅವರಿಗೆ ಟಿಕೆಟ್ ನೀಡದೆ ವಂಚಿಸಿದ್ದು, ಸಮುದಾಯದ ಜನರಿಗೆ ನೋವುಂಟು ಮಾಡಿದೆ . ಹೀಗಾಗಿ ಪಾಲೆಮಾರ್ ಅವರಿಗೆ ನ್ಯಾಯ ಸಿಗುವ ತನಕ ತಟಸ್ಥ ನೀತಿ ಅನುಸರಿಸುವ ನಿರ್ಧಾರ ತಳೆದಿದ್ದೇವೆ ಎಂದರು.
ಇದೇ ವೇಳೆ ಒಕ್ಕೂಟದ ಸದಸ್ಯರಾದ ಯೋಗೀಶ್ ಜೆಪ್ಪು, ಕಲ್ಪನಾ, ಮುಂತಾದವರು ಉಪಸ್ಥಿತರಿದ್ದರು.