ಬಂಟ್ವಾಳ, ಏ 25: ದಕ್ಷಿಣ ಕನ್ನಡದ ರಾಜಕೀಯ ಶಕ್ತಿ ಕೇಂದ್ರದಲ್ಲಿ ಬಂಟ್ವಾಳ ಕ್ಷೇತ್ರವೂ ಒಂದು. ಇಲ್ಲಿ ಬಿಲ್ಲವರು, ಮುಸ್ಲಿಮರು, ಹಾಗೂ ಬಂಟ ಸಮುದಾಯಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಲ್ಲವ ಮತಗಳಂತೆ ಮುಸ್ಲಿಂ ವೋಟುಗಳು ಇಲ್ಲಿ ನಿರ್ಣಾಯಕ. ಮುಸ್ಲಿಂ ಮತದಾರರ ಮತಗಳಿಂದ ಕಾಂಗ್ರೆಸ್ ಪಕ್ಷದ ಗೆಲುವಿನ ಹಾದಿ ಇಲ್ಲಿಯವರೆಗೆ ಸುಗಮವಾಗಿತ್ತು. ಆದರೆ ಎಸ್ಡಿಪಿಐ ಪಕ್ಷದ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಿಯಾಝ್ ಫರಂಗಿಪೇಟೆ ಸ್ಪರ್ಧೆಗಿಳಿದಿದ್ದರಿಂದ ಮುಸ್ಲಿಂ ಜನಾಂಗದ ಮತಗಳು ಹಂಚಿಹೋಗುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಇದೀಗ ರಿಯಾಝ್ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರ ಗೆಲುವಿಗೆ ಹಾದಿ ಮಾಡಿಕೊಟ್ಟಂತಾಗಿದೆ.
ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಬೇಕಾಗಿರುವ ಕಾರಣ ಹಾಗೂ ಎಸ್ಡಿಪಿಐ ಸ್ಪರ್ಧೆಯಿಂದ ಜಾತ್ಯತೀತ ಮತಗಳ ವಿಭಜನೆಯಾಗಿ ಕೋಮುವಾದಿಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎನ್ನುವುದಕ್ಕಾಗಿ ಪಕ್ಷದ ವರಿಷ್ಠರು ಈ ತೀರ್ಮಾನ ಕೈಗೊಂಡಿದ್ದಾರೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ತಾನು ಬದ್ಧನಾಗಿದ್ದೇನೆ ಎಂದು ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.
ಆದರೆ ಇದೀಗ ರಿಯಾಝ್ ಕಣದಿಂದ ಹಿಂದೆ ಸರಿಯಲು, ಕಾಂಗ್ರೇಸ್ - ಎಸ್ಡಿಪಿಐ ಒಳಒಪ್ಪಂದ ಕಾರಣ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.