ವಿಟ್ಲ: ರೈತರು, ಕೃಷಿಕರು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ವಿವಿಧ ರೀತಿಯಲ್ಲಿ ಸಾಧನೆ ಮಾಡಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬೈಕ್ ಮೆಕ್ಯಾನಿಕ್ ತರಕಾರಿ ಕೃಷಿಯನ್ನು ತಮ್ಮ ಮನೆಯ ಛಾವಣಿಯಲ್ಲಿ ನೆಟ್ಟು ಇದೀಗ ಜನಮನ್ನಣೆಗೆ ಗಳಿಸಿದ್ದಾರೆ.
ವಿಟ್ಲ ಮೇಗಿನಪೇಟೆ ನಿವಾಸಿ, ವಿಟ್ಲ ಭಗವತೀ ದೇವಸ್ಥಾನದ ಎದುರುಗಡೆ ಇರುವ ಶೇಖರ್ ಆಟೋ ವರ್ಕ್ಸ್ನ ಬೈಕ್ ಮೆಕ್ಯಾನಿಕ್ ತರಕಾರಿ ಕೃಷಿಯನ್ನು ಹವ್ಯಾಸವಾಗಿ ಮಾಡಿ ಯಶಸ್ವಿಯಾಗಿದ್ದಾರೆ. ವಿಟ್ಲ ಸುತ್ತಮುತ್ತಲ ಬೈಕ್ ಸವಾರರಿಗೆ ಚಿರಪರಿಚಿತರಾದ ಯೂಸುಫ್ ಗಮಿ ಅವರು ಕಳೆದ ವರ್ಷ ಈ ಕಾಯಕ ಆರಂಭಿಸಿದರು. ಇರುವುದು 14 ಸೆಂಟ್ಸ್ ಜಾಗ. ಅದರಲ್ಲಿ ಮನೆ ಇದೆ. ಮತ್ತು ಕೆಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಆದುದರಿಂದ ಮನೆ ಮೇಲೆ ಒಟ್ಟು 200 ಚದರ ಅಡಿಯಷ್ಟು ವಿಸ್ತೀರ್ಣವಿರುವ ವಿಶಾಲ ಜಾಗವಿದೆ. ಬೈಕ್ ದುರಸ್ತಿಗೆಂದು ಹೋದಾಗ ಮನೆಯವರು ಬೆಂಡೆ ನೀಡಿದ್ದರು. ಅದನ್ನು ಬೀಜವಾಗಿಸಿದ ಅವರು ಹತ್ತಾರು ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಬೆಳೆಸಲು ಆರಂಭಿಸಿದರು.
ಸಾಂದರ್ಭಿಕ ಚಿತ್ರ
ತೊಟ್ಟೆಯಲ್ಲಿ ಸ್ವಲ್ಪ ಭಾಗ ಕೆಂಪು ಮಣ್ಣು. ಮತ್ತೊಂದಷ್ಟು ಭಾಗ ಸುಡುಮಣ್ಣು. ಮನೆಯ ಕಸಗಳನ್ನು ಸುಡುಮಣ್ಣಾಗಿಸಿದ ಅವರು ಅದನ್ನು ಕೃಷಿಗೆ ಬಳಸಿದರು. ಬೆಂಡೆ ಬೀಜ ಬಿತ್ತಿದರು. ತಾರಸಿಯಲ್ಲಿ ಪಾಚಿ ಬರುತ್ತಿತ್ತು. ಅವನ್ನು ಮಳೆಗಾಲದಲ್ಲಿ ಒಂದು ಕಡೆ ಸಂಗ್ರಹಿಸಿ, ರಾಶಿ ಹಾಕಿದ್ದರು. ಪಕ್ಕದಲ್ಲೇ ಇದ್ದ ಮರದಿಂದ ಬಿದ್ದ ಬೀಜ ಈ ಪಾಚಿಯಲ್ಲಿ ಬೆಳೆಯಲಾರಂಭಿಸಿತು. ಅತ್ಯಂತ ಹುಲುಸಾಗಿ ಬೆಳೆದ ಗಿಡವನ್ನು ನೋಡಿ ಆಶ್ಚರ್ಯವಾಯಿತು. ಮತ್ತು ಅದನ್ನು ಬೆಂಡೆ ಮತ್ತು ಇತರ ಕೃಷಿಗಳಿಗೆ ಗೊಬ್ಬರವಾಗಿ ಬಳಸಿದರು. ಅದು ಯಶಸ್ವಿಯಾಯಿತು. ತಾರಸಿಯ ಪಾಚಿಯನ್ನೇ ಗೊಬ್ಬರವಾಗಿಸಿದ ಅವರ ಅನುಭವ ಮತ್ತು ಯೋಚನೆ ಶ್ಲಾಘನೀಯವಾದುದು.
ಈ ಬಾರಿ 100 ಬೆಂಡೆ ಸಸಿಗಳನ್ನು ಬೆಳೆಸಿದರು. ಪ್ರತಿದಿನವೂ ಪ್ರತಿ ಗಿಡದಲ್ಲಿಯೂ ಒಂದೊಂದು ಬೆಂಡೆ ಪಡೆಯುವ ಗುರಿ ಅವರದ್ದು. ಅದು ಯಶಸ್ವಿಯಾಗಿದೆ. ಈ ತನಕ ಅದೇ ಪ್ರಮಾಣದಲ್ಲಿ ಲಭ್ಯವಾಗಿದೆ.
ಆಗಸ್ಟ್ ತಿಂಗಳಲ್ಲಿ ಬಿತ್ತಿದ ಬೀಜದಲ್ಲಿ ಒಂದು ತಿಂಗಳ ಬಳಿಕ ಬೆಳೆ ಪಡೆಯುವ ಅವರ ಗುರಿಯೂ ಈಡೇರಿದೆ. ಮತ್ತು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನೀರಿನ ಬರ ಬರದೇ ಇದ್ದರೆ ಅಲ್ಲಿತನಕವೂ ಬೆಳೆಯನ್ನು ಪಡೆಯಬೇಕೆಂದು ಆಶಯ ವ್ಯಕ್ತಪಡಿಸುತ್ತಾರೆ ಯೂಸುಫ್ ಗಮಿ ಅವರು
ತಾರಸಿಯಿಂದ ತೊಂಡೆ ಚಪ್ಪರವವನ್ನೂ ಇಳಿಸಲಾಗಿದೆ. ಮನೆ ಮುಂದಿನ ಭಾಗದಲ್ಲಿ ತೊಂಡೆ ಬುಡವೆದ್ದು ತಾರಸಿಗೇರುತ್ತದೆ. ಆ ಚಪ್ಪರದಲ್ಲಿ ತೊಂಡೆಕಾಯಿಯನ್ನೂ ಪಡೆಯುತ್ತಿರುವ ಅವರು ಈ ಕೃಷಿಗಾಗಿ ಆಡಿನ ಹಿಕ್ಕೆಯನ್ನು ಬಳಸುತ್ತಾರೆ. ಅದಕ್ಕಾಗಿ ಆಡು ಮತ್ತು ಕೋಳಿಯನ್ನೂ ಸಾಕುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೇ ಹಿತ ಮಿತವಾಗಿ ಬೆಳೆಸುವ ಇವರ ಕೃಷಿ ಮಾದರಿಯಾಗಿದೆ. ಅನುಕರಣೀಯವಾಗಿದೆ.
ದ್ರಾಕ್ಷೆ, ನಿಂಬೆ, ಕಹಿಬೇವು, ತೆಂಗು ಎಲ್ಲವೂ ಇಲ್ಲಿದೆ. ಇರುವ ಸ್ವಲ್ಪ ಜಾಗದಲ್ಲಿ ಮೆಕ್ಯಾನಿಕ್ ಯೂಸುಫ್ ಅವರ ಕೃಷ್ಯುತ್ಪನ್ನಗಳಿಗೆ ಭಾರೀ ಬೇಡಿಕೆಯೂ ಇದೆ. ಸಾವಯವ ಬೆಂಡೆ, ತೊಂಡೆಕಾಯಿಗಳನ್ನು ಮೆಕ್ಯಾನಿಕ್ ಶಾಪ್ನಲ್ಲಿ ತಂದಿಟ್ಟರೆ ತಕ್ಷಣ ಮಾರಾಟವೂ ಆಗುತ್ತಿದೆ. ಇವರಿಗೆ ಮಾಲಕರಾದ ಚಂದ್ರಶೇಖರ ಭಟ್ ಪಡಾರು ಅವರ ಬೆಂಬಲವೂ ಇದೆ. ತನ್ನ ಬೈಕ್ ಮೆಕ್ಯಾನಿಕ್ ವೃತ್ತಿಯ ನಡುವೆಯೂ ತರಕಾರಿ ಕೃಷಿಯತ್ತ ವಿಶೇಷ ಗಮನ ಹರಿಸಿರುವ ಯೂಸುಫ್ ಅವರ ಕಾರ್ಯ ಶ್ಲಾಘನೀಯವಾಗಿದೆ.
ಮಹಮ್ಮದ್ ಆಲಿ, ವಿಟ್ಲ ದಾಯ್ಜಿವಾರ್ಲ್ಡ್ 247