ಏ, 25: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಜೋಧ್ಪುರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಭದ್ರತಾ ಕಾರಣಗಳಿಂದಾಗಿ ಇಂದು ಅಸಾರಾಂ ಬಾಪು ಇರುವ ಜೈಲಿನಲ್ಲೇ ನ್ಯಾಯಾಧೀಶ ಮಧುಸೂದನ್ ಶರ್ಮಾ, ಅಸಾರಾಂ ಬಾಪು ಸಹಿತ ಎಲ್ಲಾ ಐವರು ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯ ಪ್ರಕಟಿಸಿದರು. ಹೀಗಾಗಿ 77 ರ ಹರೆಯದ ಅಸಾರಾಂಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ನೀಡುವ ಸಾಧ್ಯತೆಗಳಿವೆ.
ಅಸಾರಾಂ ಬಾಪುವನ್ನು 2 ಪ್ರತ್ಯೇಕ ಅತ್ಯಾಚಾರ ಪ್ರಕರಣಗಳ ಆರೋಪದಲ್ಲಿ 2013 ರಲ್ಲಿ ಬಂಧನಕ್ಕೆ ಗುರಿಪಡಿಸಿ ಜೋಧ್ಪುರ ಜೈಲಿನಲ್ಲಿಡಲಾಗಿತ್ತು. . ಉತ್ತರಪ್ರದೇಶದ ಶಹಜಹಾನ್ಪುರ ಮೂಲದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಅಸಾರಾಂ ಮೇಲಿತ್ತು. ಸಂತ್ರಸ್ಥ ಬಾಲಕಿ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಸ್ವಯಂಘೋಷಿತ ದೇವಮಾನವ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದ. ಇನ್ನು ಪ್ರಕರಣ ಸಂಬಂಧ 9 ಮಂದಿ ಸಾಕ್ಷಿ ಹೇಳಿದ್ದರು. ಈ ಪೈಕಿ 3 ಮಂದಿ ಅಸರಾಂಬಾಪು ಅನುಯಾಯಿಗಳ ದಾಳಿಯಲ್ಲಿ ಸಾವನ್ನಪ್ಪಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ರಾಜಸ್ಥಾನ, ಗುಜರಾತ್ ಹಾಗೂ ಹರ್ಯಾಣದಲ್ಲಿ ಗಲಭೆ ಸಾಧ್ಯತೆ ಮನಗಂಡು ಮುನ್ನೆಚ್ಚರಿಕಾ ಕ್ರಮವಾಗಿ ರಾಜಸ್ಥಾನ ಹೈಕೋರ್ಟ್ ಆದೇಶದ ಮೇರೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ