ಸುಳ್ಯ, ಏ 24: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಜೆಂಡಾ ಕಡೆ ಬಿಜೆಪಿ ಮುಖ ಮಾಡಿದಂತಿದೆ. ಈ ಚುನಾವಣೆಯಲ್ಲಿ ಅಭಿವೃದ್ಧಿ ವಿಷಯದಲ್ಲಿ ನಾವು ಜನರ ಮುಂದೆ ಹೋಗುವುದಾಗಿ ನಾವು ಹೇಳಿಕೊಂಡಿದ್ದೇವೆ. ಈಗ ಬಿಜೆಪಿಯವರು ಇದೇ ವಿಚಾರ ಮಾತನಾಡಿ ಚುನಾವಣೆ ಎದುರಿಸಲು ಹೊರಟಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು 24 ವರ್ಷದ ಬಳಿಕವೂ ಅಂಗಾರರು 110 ಕೆವಿ ಸಬ್ಸ್ಟೇಷನ್ ಬಗ್ಗೆ ಭರವಸೆ ನೀಡುತ್ತಿದ್ದಾರೆ. ಆದರೆ ಜನ ಇದನ್ನು ಒಪ್ಪಲು ತಯಾರಿಲ್ಲ.24 ವರ್ಷದಿಂದ ಸಾಧ್ಯವಾಗದ್ದು, ಅವರಿಗೆ 5 ವರ್ಷದಲ್ಲಿ ಸಾಧ್ಯವಾಗಬಹುದೇ? ಎಂದರಲ್ಲದೆ, ಒಂದು ರೀತಿಯಲ್ಲಿ ಹಿಂದೂ ಸಮಾಜ ಅವರಿಂದ ಶೋಷಣೆ ಮುಕ್ತವಾಗಿದೆ. ಧರ್ಮಗಳ ನಡುವೆ ವಿಭಜನೆ ಮಾಡಿ ಕೋಮು ವಿಚಾರದಲ್ಲಿ ಓಟು ಗಿಟ್ಟಿಸುವ ಅವರ ಪ್ರಯತ್ನಕ್ಕೆ ತಡೆ ಬಿದ್ದಿದೆ. ಹೀಗಾಗಿ ಅಭಿವೃದ್ಧಿ ವಿಚಾರ ಮಾತನಾಡತೊಡಗಿದ್ದಾರೆ ಎಂದರು.
ಕಾಂಗ್ರೆಸ್ನ್ನು ಅಲ್ಪಸಂಖ್ಯಾತರ ವಿಚಾರದಲ್ಲಿ ಟೀಕಿಸುತ್ತಿದ್ದ ಬಿಜೆಪಿಯವರು ಕೂಡಾ ಈಗ ಅಲ್ಪಸಂಖ್ಯಾತರನ್ನು ಓಲೈಸಲು ಹೊರಟಿದ್ದಾರೆ. ಅಲ್ಪಸಂಖ್ಯಾತರು ಬಿಜೆಪಿ ಸೇರಿದರು ಎಂದು ದೊಡ್ಡ ಪ್ರಚಾರ ನಡೆಸುತ್ತಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪಕ್ಷಗಳು ಜಾತ್ಯಾತೀತವಾಗಿರಬೇಕು ಎಂದು ಬಯಸುವವರು ನಾವು ಎಂದರು. ಆದರೆ ಬಿಜೆಪಿ ಇಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದೆ. ನಮ್ಮ ಅಭ್ಯರ್ಥಿ ಎಲ್ಲಾ ಧರ್ಮದ ಶ್ರದ್ಧಾ ಕೇಂದ್ರಗಳಿಗೆ ತೆರಳಿ ಬಳಿಕ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಒಂದು ಧರ್ಮದ ಶ್ರದ್ಧಾ ಕೇಂದ್ರಕ್ಕೆ ಮಾತ್ರ ಹೋಗಿದ್ದಾರೆ. ಇದನ್ನು ಖಾಸಿಲೆಯಂತವರು ಪ್ರಶ್ನೆ ಮಾಡಬೇಕು ಎಂದು ಜಯಪ್ರಕಾಶ್ ರೈ ಹೇಳಿದರು.
ಬಿಜೆಪಿಯವರು ನಮ್ಮನ್ನು ಸಿದ್ದರಾಮಯ್ಯರಿಂದ ಹಿಡಿದು ಜಯಪ್ರಕಾಶ್ ರೈ ತನಕ ಎರವಲು ನಾಯಕರು ಪಕ್ಷದಲ್ಲಿದ್ದಾರೆ ಎಂದು ಟೀಕಿಸಿದ್ದಾರೆ. ಬಿಜೆಪಿ ನಡೆಯುತ್ತಿರುವುದೇ ಎರವಲು ನಾಯಕರ ಮೂಲಕ ಎನ್ನುವುದು ಅವರು ಅರ್ಥಮಾಡಿಕೊಳ್ಳುವುದು ಒಳಿತು. ಬಿಜೆಪಿಯ ನಿಯಂತ್ರಣ ಇರುವುದು ಆರ್.ಎಸ್.ಎಸ್.ನಲ್ಲಿ. ಅವರ ಕಮಾಂಡ್ ಪ್ರಕಾರ ಪಕ್ಷ ನಡೆಯುತ್ತದೆ. ಈಗ ಶಾಸಕರ ಸುತ್ತಮುತ್ತ ಇದ್ದು, ಅವರ ಕೆಲಸ ಕಾರ್ಯ ನೋಡುತ್ತಿರುವವರು ಈ ಮೊದಲು ಕಾಂಗ್ರೆಸ್ನಲ್ಲಿದ್ದವರು. ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮರಂತಹ ನಾಯಕರು ಜನತಾ ಪಕ್ಷದಿಂದ ಬಂದವರು ಎಂದು ಜಯಪ್ರಕಾಶ್ ರೈ ಹೇಳಿದರು.
ಸ್ಕಿಲ್ ಗೇಮ್ ಸೇರಿದಂತೆ ಎಲ್ಲಾ ಅನಧಿಕೃತ ದಂಧೆಗಳಲ್ಲಿ ಎಷ್ಟು ಪರ್ಸೆಂಟ್ ಬಿಜೆಪಿಯವರಿದ್ದಾರೆ ಎಂದು ಅರ್ಥಮಾಡಿಕೊಳ್ಳುವುದು ಒಳ್ಳೆಯದು ಎಂದು ಅವರು ಹೇಳಿದರು.
ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಹಾಗೂ ಅಬ್ದುಲ್ ಗಫೂರ್ ಕಲ್ಮಡ್ಕ ಮಾತನಾಡಿ “ಬೆಳ್ಳಾರೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈಯವರು ಕಳೆದ 5 ವರ್ಷದಲ್ಲಿ ರೂ.7 ಕೋಟಿ 44 ಲಕ್ಷ ರೂ ವಿವಿಧ ರೂಪದಲ್ಲಿ ಅಭಿವೃದ್ಧಿಗೆ ಅನುದಾನ ಒದಗಿಸಿ ಕೊಟ್ಟಿದ್ದಾರೆ. ಆದರೆ ಸುಳ್ಯ ಶಾಸಕ ಅಂಗಾರರ ಕೊಡುಗೆ ಏನು“ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಾಮತ್, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಂ ಭಟ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಪ್ರಮುಖರಾದ ಪಿ.ಎಸ್.ಗಂಗಾಧರ್, ಅನಿಲ್ ರೈ ಬೆಳ್ಳಾರೆ ಮುಂತಾದವರು ಉಪಸ್ಥಿತರಿದ್ದರು.