ಪುತ್ತೂರು, ಏ 24: ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆ ಅನಿತಾ ಆಯಿಲ್ ಮಿಲ್ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕಾಮಗಾರಿ ವೇಳೆ ಗುಡ್ಡೆ ಕುಸಿದು ಕೊಪ್ಪಳ ಮೂಲದ ಕಾರ್ಮಿಕರು ಮಣ್ಣಿನಡಿ ಸಿಲುಕಿ ಜೀವನ್ಮರಣ ಹೋರಾಟದಲ್ಲಿರುವ ದುರಂತ ಏ. 24 ರಂದು ಬೆಳಿಗ್ಗೆ ಸುಮಾರು 10.30 ರ ವೇಳೆಗೆ ನಡೆದಿದೆ.
ಮಣ್ಣಿನಡಿಗೆ ಸಿಲುಕಿರುವ ನಾಲ್ಕು ಮಂದಿ ಕಾರ್ಮಿಕರನ್ನೂ ರಕ್ಷಣಾ ಕಾರ್ಯದಲ್ಲಿ ಹೊರತೆಗೆಯಲಾಗಿದ್ದು, ಈರ್ವರು ನತದೃಷ್ಟ ಕಾರ್ಮಿಕರು ದುರ್ಮರಣಕ್ಕೆ ಈಡಾಗಿದ್ದಾರೆ ಎಂದು ತಿಳಿದು ಬಂದಿದೆ. ಓರ್ವನನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮೂವರನ್ನು ವೇಗವಾಗಿ ಹೊರತೆಗೆಯಲಾಯಿತಾದರೂ ನತದೃಷ್ಟ ಕಾರ್ಮಿಕನೋರ್ವ ಸುಮಾರು ಒಂದೂವರೆ ತಾಸುಗಳ ಕಾಲ ಮಣ್ಣಿನಡಿಯಲ್ಲಿಯೇ ಸಿಲುಕಿದ್ದು ಹೊರ ತೆಗೆಯುವ ವೇಳೆಗಾಗಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಈ ನತದೃಷ್ಟ ಕಾರ್ಮಿಕರು ಏ.24 ರಂದು ಬೆಳಿಗ್ಗೆಯಷ್ಟೇ ಮಂಗಳೂರಿನ ಅಡ್ಯಾರಿನಿಂದ ಪುತ್ತೂರಿಗೆ ಆಗಮಿಸಿ ಅನಿತಾ ಆಯಿಲ್ ಮಿಲ್ ನ ನೂತನ ಕಟ್ಟಡದ ಕಾಮಗಾರಿಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರ್ಮಿಕರು ಕಲ್ಪಿಸದ ರೀತಿಯಲ್ಲಿ ಸುಮಾರು 20 ಅಡಿ ಮೇಲ್ಭಾಗದಿಂದ ಒಮ್ಮಿಂದೊಮ್ಮೆಲೆ ಮಣ್ಣು ಜರಿದು ಬಿದ್ದಿದೆ. ಮೇಲ್ಭಾಗದಲ್ಲಿ ಅಂದರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸರಕಾರಿ ಜಾಹಿರಾತಿನ ಬೃಹತ್ ಗಾತ್ರದ ಕಟೌಟ್ ಉರುಳಿದಾಗ ಅದರ ಜೊತೆ ಮಣ್ಣು ಜರಿದಿದೆ. ಈ ದೃಶ್ಯ ಅನಿತಾ ಆಯಿಲ್ ಮಿಲ್ ನವರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಬರೆ ತೆಗೆದಿರುವುದರಿಂದ ಅತೀ ಎತ್ತರವಾಗಿದ್ದ ಬರೆ ಕುಸಿದಿದೆ ಎನ್ನಲಾಗಿದೆ. ಅಲ್ಲದೇ ಮೇಲ್ಭಾಗದಲ್ಲಿ ಬಸ್ಸು ಮತ್ತಿತರ ವಾಹನಗಳು ಅಡ್ಡಾಡುವುದರಿಂದ ವೈಬ್ರೇಶನ್ಗೊಳಗಾಗಿ ದುರಂತ ಸಂಭವಿಸಿರಬಹುದೆಂದೂ ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಪುತ್ತೂರು ಅಗ್ನಿಶಾಮಕ ದಳ ಹಾಗೂ ಪೊಲೀಸರ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಸ್ಲಿಂ ಸಂಘಟನೆಗಳ ಪ್ರಮುಖರು ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಆರಂಭದಲ್ಲಿ ಜೆಸಿಬಿ ಮೂಲಕ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು. ಬಳಿಕ ಹಿಟಾಚಿ ಯಂತ್ರವನ್ನು ತಂದು ಅಗೆಯಲಾಯಿತು. ಸ್ಥಳಕ್ಕೆ ಶಾಸಕಿ ಶಕುಂತಳಾ ಶೆಟ್ಟಿ, ತಹಶೀಲ್ದಾರ್ ಸೇರಿದಂತೆ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಸ್ಥಳಕ್ಕೆ ಮುಗಿಬಿದ್ದಿದ್ದರು. ಸಾರ್ವಜನಿಕರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಕಷ್ಟವಾಗಿತ್ತು.