ಕುಂದಾಪುರ, ಸೆ21: ಒಂದು ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನಾರ್ಹ ಎಂದು ಮಾಜಿ ಶಾಸಕ ಎ.ಜಿ ಕೊಡ್ಗಿ ಹೇಳಿದರು.
ಸಬ್ಲಾಡಿ ಕೆ. ಶೀನಪ್ಪ ಶೆಟ್ಟಿ ಮೆಮೋರಿಯಲ್ ಚಾರೀಟೇಬಲ್ ಟ್ರಸ್ಟ್ ಇದರ ವತಿಯಿಂದ ಕುಂದಾಪುರದ ಬಂಟರ ಯಾನೆ ನಾಡವರ ಸಂಕೀರ್ಣದ ಎಸ್.ಎಸ್ ಹೆಗ್ಡೆ ಹಾಲ್ನಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಆರೋಗ್ಯ ಸಹಾಯಧನ ವಿತರಣೆ, ಹಾಗೂ ಕೃಷಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯದ ಅವಶ್ಯಕತೆ ಇದೆ. ಬಹಳಷ್ಟು ಬದಲಾವಣೆಗಳು ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಿದೆ. ಆ ನೆಲೆಯಲ್ಲಿ ಟ್ರಸ್ಟ್ ವಿದ್ಯಾರ್ಥಿ ವೇತನ ನೀಡುತ್ತಿರುವುದು, ಉತ್ತಮ ಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೈದ್ಯಕೀಯ ನೆರವು ನೀಡಿ ಸ್ಪಂದಿಸುತ್ತಿರುವುದು ಒಳ್ಳೆಯ ಕಾರ್ಯ ಎಂದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ|ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ, ಶಿಕ್ಷಣಕ್ಕೆ ಹಣ ನೀಡುವುದು ದೇವರು ಮೆಚ್ಚುವಂತಹ ಕಾರ್ಯ. ಸಮಾಜದಲ್ಲಿ ಪಡೆದುಕೊಂಡ ಗೌರವ, ಸಮಾಜದ ಋಣ ತೀರಿಸುವ ಇಂಥಹ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿ ವೇತನ ಪಡೆದುಕೊಂಡ ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ವದ ಸಾಧನೆ ಮಾಡಿ ಮುಂದೆ ಹತ್ತು ವಿದ್ಯಾರ್ಥಿಗಳಿಗಾದರೂ ಸಹಾಯ ಮಾಡುವ ಹಂತಕ್ಕೆ ಬೆಳೆಯಬೇಕು. ಇವತ್ತು ಕೆಎಸ್, ಐಪಿಎಸ್ ನಂತಹ ವ್ಯಾಸಂಗ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಮುಂದೆ ಬರಬೇಕು ಎಂದರು.
ಈ ಸಂದರ್ಭ ಪ್ರಗತಿಪರ ಕೃಷಿಕ ಚಂದ್ರಶೇಖರ ಶೆಟ್ಟಿ ಬಿಜ್ರಿ ಅವರಿಗೆ ಸಬ್ಲಾಡಿ ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಉನ್ನತ ವ್ಯಾಸಂಗ ಮಾಡುವ ವಂಡ್ಸೆ ಹೋಬಳಿಯ ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.
ದಕ್ಷಿಣಾ ಕನ್ನಡ ಜಿಲ್ಲಾ ಹಾಲು ಒಕ್ಕೂಟ ಮಂಗಳೂರು ಇದರ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಶೇಡಿಕೊಡ್ಲು, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಶುಭಶಂಸನೆಗೈದರು. ಟ್ರಸ್ಟ್ನ ಅಧ್ಯಕ್ಷ ಎನ್.ಆನಂದ ಶೆಟ್ಟಿ ಸಬ್ಲಾಡಿ ಉಪಸ್ಥಿತರಿದ್ದರು. ಸಂಚಾಲಕ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್. ನಾರಾಯಣ ಶೆಟ್ಟಿ ಸಬ್ಲಾಡಿ ವಂದಿಸಿದರು.