ಮಂಗಳೂರು,ಸೆ.04: ಶರತ್ ಕೊಲೆ ಪ್ರಕರಣದ ಆರೋಪಿ ಬಂಟ್ವಾಳ ನಿವಾಸಿ ಕಲಂದರ್ ಶಾಫಿ ಮನೆಗೆ ಪೊಲೀಸರು ವಿಚಾರಣೆಗೆ ತೆರಳಿದ್ದ ಸಂದರ್ಭದಲ್ಲಿ ಪವಿತ್ರ ಗ್ರಂಥ ಕುರಾನ್ ಕಿತ್ತೆಸೆದು ಹರಿದು ಬಿಸಾಡಿದ್ದಾರೆ ಎನ್ನುವ ಆರೋಪದ ಕುರಿತಂತೆ ಸುದ್ದಿಗೋಷ್ಠಿ ನಡೆಸಿರುವ ಶಾಸಕ ಜೆ.ಆರ್.ಲೋಬೋ, ಇಂತಹ ಘಟನೆ ನಡೆದಿರುವುದಾದಲ್ಲಿ ಅದು ದುರಾದೃಷ್ಟಕರ ಎಂದು ಹೇಳಿದ್ದಾರೆ.
ಮಂಗಳೂರಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಶಾಸಕರು, ಯಾವುದೇ ಧರ್ಮದವರ ಭಾವನೆಗಳಿಗೆ ನೋವುಂಟು ಮಾಡುವ ಕೆಲಸ ಸಲ್ಲದು. ಪವಿತ್ರ ಕುರಾನ್ ಗ್ರಂಥ ಸೇರಿದಂತೆ ಎಲ್ಲಾ ಧರ್ಮದವರಿಗೆ ಪೂಜನೀಯವಾಗಿರುವ ಧಾರ್ಮಿಕ ಸಾಹಿತ್ಯಗಳಿಗೆ ನಾವು ಗೌರವ ನೀಡಬೇಕು.
ಪೊಲೀಸರು ನಡೆಸಿದ ಈ ಘಟನೆ ಬಗ್ಗೆ ಸತ್ಯಾಸತ್ಯತೆ ಅರಿಯಲು ತಾನು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಸೂಚನೆ ನೀಡುವುದಾಗಿ ಹೇಳಿದರು. ಅಲ್ಲದೆ ಇಂತಹ ಪ್ರಕರಣ ನಡೆದಿದ್ದಲ್ಲಿ ಅದನ್ನು ತಾನು ಖಂಡಿಸುವುದಾಗಿಯೂ ಹೇಳಿದರು.