ಮಂಗಳೂರು, ಏ 20: ನಗರದ ಬಂಟ್ಸ್ ಹಾಸ್ಟೆಲ್ ಸರ್ಕಲ್ ನಲ್ಲಿರುವ ಅದೃಷ್ಟದ ಕಟ್ಟಡ ಎಂದೇ ಭಾವಿಸಲಾದ ಕಚೇರಿಯಿಂದ ಬಿಜೆಪಿ ರಣಕಹಳೆ ಮೊಳಗಿಸುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇಲ್ಲಿರುವ ಶಿಥಿಲಗೊಂಡ ಹೆಂಚುಗಳ ಮನೆಯನ್ನು 2004ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಳಸಿಕೊಳ್ಳಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿದೆ ಎಂಬ ನಂಬಿಕೆಯಿಂದ ಬಿಜೆಪಿ ಅಭ್ಯರ್ಥಿಗಳು ಈ ಕಟ್ಟಡವನ್ನು ಚುನಾವಣಾ ಕಚೇರಿಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
2004 ರಲ್ಲಿ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆದಾಗ ಬಿಜೆಪಿ ಚುನಾವಣಾ ಕಚೇರಿಯನ್ನಾಗಿ ಈ ಕಟ್ಟಡವನ್ನು ಬಳಸಿಕೊಂಡಿತ್ತು. ಆಗ ಮಂಗಳೂರು ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ ಜಯಗಳಿಸಿತ್ತು. ವೀರಪ್ಪಮೊಯ್ಲಿ ಅವರನ್ನು ಸೋಲಿಸಿ ಸದಾನಂದಗೌಡ ಸಂಸದರಾಗಿ ಆಯ್ಕೆಯಾಗಿದ್ದರು ಎಂದು ತಿಳಿಸಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ಪಿ.ವಿ.ಎಸ್ ವೃತ್ತದಲ್ಲಿರುವ ಬಿಜೆಪಿ ಪಕ್ಷದ ಕಚೇರಿಯನ್ನು ಚುನಾವಣಾ ಕಚೇರಿಯನ್ನಾಗಿ ಬಳಸಿಕೊಳ್ಳಲಾಗಿತ್ತು. ಇದರಿಂದಾಗಿ ಹಾನಿಕಾರಿಕ ರೀತಿಯ ಫಲಿತಾಂಶ ಬಂದಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕಟ್ಟಡವನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಿಕೊಂಡಿದ್ದರಿಂದ ನಷ್ಟ ಉಂಟಾಗಿತ್ತು ಎಂದು ಹೇಳಿದರು.