ಹರಿಣಿ ಬಂಗೇರ, ಬೆಳ್ತಂಗಡಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರ್ 2 ಸಿನಿಮಾ ಈಗಷ್ಟೇ ಸೆಟ್ಟೇರುತ್ತಿದೆ. ಈ ನಡುವೆ ಈ ಸಿನಿಮಾದ ಫ್ಯಾನ್ ಮೇಡ್ ಪ್ರೊಮೋಶನಲ್ ಹಾಡೊಂದು ಯುಟ್ಯೂಬ್ ನಲ್ಲಿ ಸಕತ್ ಸದ್ದು ಮಾಡುತ್ತಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.
ಈ ಹಾಡಿನ ಸಂಯೋಜಕರು ನಮ್ಮ ಮಂಗಳೂರಿನವರು ಅನ್ನೋದು ಹೆಮ್ಮೆಯ ವಿಚಾರ. ಹೌದು, ಟಗರು 2 ಸಿನಿಮಾದ ‘ಬಂತು ಬಂತು ಟಗರು...ಮದವೇರಿದ ಟಗರು ’ ಹಾಡಿನ ಸಂಯೋಜಕರು ಮಂಗಳೂರಿನ ಬಿಕರ್ನಕಟ್ಟೆಯ ಲಾಯ್ ವ್ಯಾಲೆಂಟೈನ್ ಸಲ್ಡಾನಾ. ಇವ್ರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಮಾತ್ರವಲ್ಲದೇ, ಸ್ವತ: ಹಾಡಿದ್ದಾರೆ. ವಿಶೇಷ ಅಂದ್ರೆ ಈ ಹಾಡನ್ನು ಪಿಆರ್ ಕೆ ಪ್ರೊಡಕ್ಷನ್ ಸ್ಟುಡಿಯೋ ಮೂಲಕ ನಟ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ. ಪಿಆರ್ ಕೆ ಸ್ಟುಡಿಯೋ ಮೂಲಕ ರಿಲೀಸ್ ಆದ ಹಾಡುಗಳಲ್ಲಿ ಈ ಹಾಡು ಮೊದಲ ಫ್ಯಾನ್ ಮೇಡ್ ಹಾಡಾಗಿದೆ. ಆ ಮೂಲಕ ಮಂಗಳೂರಿನ ಪ್ರತಿಯೊಬ್ಬರು ಗಾಂಧಿ ನಗರದಲ್ಲಿ ಹವಾ ಸೃಷ್ಟಿಸಿದ್ದಾರೆ. ಲಾಯ್ ಅವರಿಗೆ ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದು, ಅನೇಕ ತುಳು ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಕೂಡ ಮಾಡಿದ್ದಾರೆ.
ಇವರು ತುಳುವಿನ ‘ರಂಭಾರೂಟಿ’ ಸಿನಿಮಾಕ್ಕೆ ಹಾಡನ್ನು ಹಾಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ತುಳು ಸಿನಿಮಾವೊಂದರ ಹಾಡು ಮೊದಲ ಬಾರಿಗೆ ‘ಐ ಟ್ಯೂನ್ಸ್ ನಲ್ಲಿ 34 ನೇ ರ್ಯಾಂಕಿಂಗ್ ಪಡೆದಿದ್ದು’, ಇದರ ಹೆಗ್ಗಳಿಕೆ ಲಾಯ್ ಅವರಿಗೆ ಸಲ್ಲುತ್ತದೆ. ಲಾಯ್ ಅವರ ಪ್ರತಿಭೆಗೆ ಸ್ಯಾಂಡಲ್ ವುಡ್ನ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಹಾಡಿಗೆ ಸತೀಶ ಮಾಚೇನಹಳ್ಳಿ ಸಾಹಿತ್ಯ ಬರೆದಿದ್ದಾರೆ.
ಬಾಲ್ಯದಿಂದಲೇ ಸಂಗೀತವನ್ನು ಮೆಚ್ಚಿಕೊಂಡಿದ್ದ ಲಾಯ್ ಕಾಲೇಜು ದಿನಗಳಲ್ಲಿ ಸಾಕಷ್ಟು ಕಾರ್ಯಕ್ರಮ ನೀಡಿದ್ದಾರೆ.ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದ ಇವರು ಬಳಿಕ ಚೆನ್ನೈನ ರೆಹಮಾನ್ ಸ್ಕೂಲ್ ನಲ್ಲಿ ಮ್ಯೂಸಿಕ್ ಪ್ರೊಡಕ್ಷನ್ ಆಂಡ್ ಸೌಂಡ್ ಡಿಸೈನ್ ಕೋರ್ಸ್ ಪೂರೈಸಿದ್ದಾರೆ. ಆದಾದ ಬಳಿಕ ಇವರು ಚರಿತ್ರಾ ಅನ್ನೋ ಹೆಸರಿನ ದೇಸೀ ರಾಕ್ ಬ್ಯಾಂಡ್ ಕಟ್ಟಿ ದೇಶ, ವಿದೇಶಗಳಿಗೆ ತೆರಳಿ ಕಾರ್ಯಕ್ರಮ ನೀಡಲು ಆರಂಭಿಸಿದರು. ಈಗಾಗಲೇ ಹಲವಾರು ಶೋಗಳನ್ನು ನೀಡಿದ್ದು, ಪ್ರತೀ ವರ್ಷ ದುಬೈಗೆ ತೆರಳಿ ಶೋ ನೀಡುತ್ತಾರೆ.
ಇದರೊಂದಿಗೆ ಕಿರುಚಿತ್ರವನ್ನು ನಿರ್ಮಿಸುತ್ತಿದ್ದು, ಹಲವಾರು ಸಿನಿಮಾಗಳಿಗೆ ಪ್ರಶಸ್ತಿಯು ಲಭಿಸಿದೆ. ಮಾತ್ರವಲ್ಲದೇ ಅನೇಕ ಆಲ್ಬಮ್ ಸಾಂಗ್ ಇವರ ನೇತೃತ್ವದಲ್ಲಿ ನಿರ್ಮಾಣವಾಗಿದ್ದು, ಅನೇಕ ಜಾಹಿರಾತುಗಳಿಗೂ ಟ್ಯೂನ್ ನೀಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇವರ ನಿರ್ದೇಶನದಲ್ಲಿ ಅನೇಕ ಹಾಡುಗಳು ಮೂಡಿಬಂದಿದೆ. ಇವರ ಸಾಧನೆಗೆ ಪ್ರತಿಫಲವೆಂಬಂತೆ 2015 ರಲ್ಲಿ ಏಕ್ ಗಲ್ತಿ ಕಿರುಚಿತ್ರಕ್ಕೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಪ್ರಶಸ್ತಿ ಲಭಿಸಿದೆ. 2011 ರ ಐಸಿಸ್ ವರ್ಲ್ಡ್ ಕಪ್ ಗೆ ಇವರು ಹಾಡಿದ ಹಾಡಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಹಾಗೆಯೇ ಇವರು ಒಮಾನ್ ನಲ್ಲಿ ಕಾರ್ಯಕ್ರಮವೊಂದು ನೀಡಿದ್ದಕ್ಕಾಗಿ ಭಾರತದ ರಾಯಭಾರಿಯಿಂದ ಗೌರವ ಲಭಿಸಿದೆ. ಭಾರತ ಕ್ರಿಕೆಟ್ ತಂಡದ ಆಟಗಾರ ಶಿಖರ ಧವನ್ ಜೊತೆ ಒಂದು ಜಾಹಿರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಇವರ ನಿರ್ದೇಶನದ 2 ಕಿರುಚಿತ್ರಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿತ್ತು. ಕರಾವಳಿಯಲ್ಲಿ ಮೊದಲ ಬಾರಿಗೆ ಹಿಂದಿ ಆಲ್ಬಮ್ ಸಾಂಗ್ ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.