ಅಹ್ಮದಾಬಾದ್,ಎ.17: ಕೊನೆಯ ಕ್ಷಣದವರೆಗೆ ತೆರೆಯ ಮರೆಯಲ್ಲಿ ನಡೆದ ಮನವೊಲಿಕೆ ಯತ್ನಗಳಿಗೆ ಮಣಿಯದ ವಿಶ್ವ ಹಿಂದೂ ಪರಿಷತ್ ನ ಮಾಜಿ ಮುಖಂಡ ಪ್ರವೀಣ್ ತೊಗಡಿಯಾ ಮೊದಲೇ ಘೋಷಿದಂತೆ ಮಂಗಳವಾರ ದಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡುವ ಆರಂಭಿಸಿರುವ ಸತ್ಯಾಗ್ರಹಕ್ಕೆ ಹಲವು ಸಾಧು ಸಂತರು ಮತ್ತು ಬೆಂಬಲಿಗರು ಸಾಥ್ ನೀಡಿದರು.
ಈ ಸಂದರ್ಭ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ತೊಗಡಿಯಾ, ನನ್ನ ಜೀವನದ 50 ವರ್ಷಗಳನ್ನು ಹಿಂದುಗಳ ಶ್ರೇಯೋಭಿವೃದ್ದಿಗಾಗಿ ಮುಡಿಪಾಗಿಟ್ಟ ನಂತರ ನಾನು ಹೊರ ಹಾಕಲ್ಪಟ್ಟೆ, ಯಾವುದಕ್ಕಾಗಿ ಎಂಬುವುದನ್ನು ಪ್ರಶ್ನಿಸಲಿಲ್ಲ. ನನಗಾಗಿ ಯಾವುದೇ ಪದವಿಯನ್ನು ಕೇಳಲಿಲ್ಲ. ಆದರೆ ಪ್ರಧಾನಿಯವರಲ್ಲಿ ಗೋಹತ್ಯೆ ನಿಷೇಧ ಮತ್ತು ಏಕರೂಪ ನಾಗರಿಕ ಸಂಹಿತೆಯ ಜಾರಿ ಮತ್ತು ನಿರ್ವಸಿತ ಕಾಶ್ಮೀರಿ ಪಂಡಿತರ ಪುನರ್ವಸತಿ ಬೇಡಿಕೆ ಇರಿಸಿದ್ದೇನೆ ಎಂದರು.
ಬಹುಮತ ದೊರೆತರೆ ಎಲ್ಲಾ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹಾರ ಕಂಡುಹಿಡಿಯುವುದಾಗಿ ಭರವಸೆ ನೀಡಿದ್ದರು. ನಿರೀಕ್ಷೆಯಂತೆ ಬಹು ಮತ ದೊರೆಯಿತು . ಆದ್ರೆ ಪ್ರಧಾನಿ ಸಮಸ್ಯೆ ಬಗೆಹರಿಸಬಹುದು ಎಂದು ನಾಲ್ಕು ವರ್ಷಗಳಿಂದ ಕಾಯುತ್ತಿದ್ದೇನೆ ಎಂದು ಲೇವಡಿ ಮಾಡಿದರು.
ಕಳೆದ ಶನಿವಾರ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ವಿ.ಎಸ್.ಕೋಕ್ಜೆ ಅವರು ತನ್ನ ಅಭ್ಯರ್ಥಿ ರೆಡ್ಡಿಯವರನ್ನು ಪರಾಭವಗೊಳಿಸಿ ವಿಹಿಂಪ ಅಂತರರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ತೊಗಾಡಿಯಾ ಸಂಘಟನೆಯನ್ನು ತೊರೆದಿದ್ದರು. ಜಿಎಂಡಿಸಿ ಮೈದಾನದಲ್ಲಿ ತೊಗಾಡಿಯಾರ ನಿರಶನ ನಿಗದಿಯಾಗಿತ್ತಾದರೂ ಪೊಲೀಸರು ಅನುಮತಿ ನಿರಾಕರಿಸಿದ ಬಳಿಕ ವಿಹಿಂಪ ಕಚೇರಿಯ ಹೊರಗೆ ಸ್ಥಳಾಂತರಗೊಂಡಿದೆ.