ಉಡುಪಿ, ಜು. 23 (DaijiworldNews/MB) : ಖಾಸಗಿ ಬಸ್ ನಿರ್ವಾಹಕರು, ಜಿಲ್ಲಾಡಳಿತ ಮತ್ತು ಕೆಎಸ್ಆರ್ಟಿಸಿ ಕೈಗೊಂಡ ನಿರ್ಧಾರದಂತೆ ಜುಲೈ 23 ರ ಗುರುವಾರದಿಂದ ಖಾಸಗಿ ಬಸ್ಗಳು ಉಡುಪಿ ಜಿಲ್ಲೆಯಲ್ಲಿ ಭಾಗಶಃ ಪುನಾರಾರಂಭವಾಗಿದೆ.
ಖಾಸಗಿ ಸಿಟಿ ಬಸ್, ಸರ್ವೀಸ್ ಬಸ್ ಹಾಗೂ ಎಕ್ಸ್ಪ್ರೆಸ್ ಬಸ್ಗಳು ಜಿಲ್ಲೆಯ ವಿವಿಧ ಭಾಗಗಳಿಗೆ ಸಂಚಾರ ಪ್ರಾರಂಭಿಸಿವೆ. ಉದ್ಯೋಗ ಕಡಿತದ ಹಿನ್ನೆಲೆ ಖಾಸಗಿ ಬಸ್ ನಿರ್ವಾಹಕರು ಕನಿಷ್ಠ ಸೇವೆಗಳನ್ನು ಮಾತ್ರ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಸುಮಾರು 35 ಸಿಟಿ, ಶಟಲ್ ಮತ್ತು ಎಕ್ಸ್ಪ್ರೆಸ್ ಬಸ್ಗಳು ಉಡುಪಿ ನಗರದಲ್ಲಿ ಗುರುವಾರ ಕಾರ್ಯಾಚರಣೆ ಆರಂಭಿಸಿವೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಉಡುಪಿ ಮತ್ತು ದಕ್ಷಿಣ ಕನ್ನಡ ನಡುವೆ ಅಂತರ ಜಿಲ್ಲಾ ಸಂಚಾರಕ್ಕೆ ಅವಕಾಶವಿದ್ದು ಉಡುಪಿ ಮತ್ತು ಮಂಗಳೂರು ನಡುವೆ ಕೆಲವು ಖಾಸಗಿ ಎಕ್ಸ್ಪ್ರೆಸ್ ಮತ್ತು ಸರ್ವಿಸ್ ಬಸ್ಗಳು ಸಂಚಾರ ಆರಂಭಿಸಿದೆ. ಹಾಗೆಯೇ ಉಡುಪಿ-ಶಿವಮೊಗ್ಗ ಬಸ್ಸುಗಳು ಕೂಡಾ ಆರಂಭವಾಗಿದೆ.
ಕೆಎಸ್ಆರ್ಟಿಸಿ ತನ್ನ ಜೆಎನ್ಎನ್ಯುಆರ್ಎಂ ಮತ್ತು ಇತರ ಸೇವೆಗಳನ್ನು ಗುರುವಾರದಿಂದ ಪ್ರಾರಂಭಿಸಲು ನಿರ್ಧರಿಸಿತ್ತು. ಆದರೆ ಅಂತರ ಜಿಲ್ಲೆ ಮತ್ತು ಅಂತರ-ತಾಲೂಕು ಕೆಎಸ್ಆರ್ಟಿಸಿ ಬಸ್ ಸಂಚಾರ ಮಾತ್ರ ಆರಂಭವಾಗಿದೆ. ಉಡುಪಿ ಕೆಎಸ್ಆರ್ಟಿಸಿ ಬಸ್ ಕಾರ್ಕಳ, ಕುಂದಾಪುರ, ಹೆಬ್ರಿ, ಹೆಜಮಾಡಿ, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ಚಿಕ್ಕಮಗಳೂರು ಹಾಗೂ ಹಾವೇರಿ ನಡುವಿನ ಬಸ್ ಸೇವೆಯನ್ನು ಆರಂಭಿಸಿದೆ.
ಹಾಗೆಯೇ ಕುಂದಾಪುರ ಜಿಲ್ಲಾಧಿಕಾರಿ ಕಚೇರಿ ಹಾಗೂ ಹೆಜಮಾಡಿ ಜಿಲ್ಲಾಧಿಕಾರಿ ಕಚೇರಿಯ ನಡುವೆ ಎರಡು ಬಸ್ಸುಗಳನ್ನು ಸಂಚರಿಸಲಿದೆ. ಆದರೆ ಮುಖ್ಯವಾಗಿರುವ ಕೆಎಸ್ಆರ್ಟಿಸಿಯ ಜೆಎನ್ಎನ್ಯುಆರ್ಎಂ ಸಿಟಿ ಬಸ್ಗಳು ಇನ್ನೂ ಕೂಡಾ ತಮ್ಮ ಸೇವೆಯನ್ನು ಪ್ರಾರಂಭಿಸಿಲ್ಲ.
ಬುಧವಾರ ನಡೆದ ಸಭೆಯಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳು ಗುರುವಾರದಿಂದ ಜೆಎನ್ಎನ್ಯುಆರ್ಎಂ ಬಸ್ಗಳ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಗುರುವಾರದಂದು ಒಂದು ಜೆಎನ್ಎನ್ಯುಆರ್ಎಂ ಬಸ್ ಕೂಡ ಸಂಚಾರ ಆರಂಭಿಸಿಲ್ಲ. ಹೆಚ್ಚಿನ ಜೆಎನ್ಎನ್ಯುಆರ್ಎಂ ಬಸ್ ಚಾಲಕರು ಹೊರ ಜಿಲ್ಲೆಯವರಾದ ಕಾರಣದಿಂದಾಗಿ ಕೆಎಸ್ಆರ್ಟಿಸಿ ಉಡುಪಿ ಡಿಪೋ ಚಾಲಕರ ಅಲಭ್ಯತೆಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ನಗರ ಬಸ್ಸುಗಳು ಸೀಮಿತ ಮಾರ್ಗಗಳಲ್ಲಿ ಮಾತ್ರ ಸಂಚಾರ ಮಾಡುವ ಕಾರಣದಿಂದಾಗಿ ಜೆಎನ್ಎನ್ಯುಆರ್ಎಂ ಬಸ್ಗಳು ಇಲ್ಲದೆ ಉಡುಪಿಯ ಜನರು ತಮ್ಮ ದೈನಂದಿನ ಕೆಲಸದ ಸ್ಥಳಕ್ಕೆ ತಲುಪಲು ಹೆಣಗಾಡುತ್ತಿದ್ದಾರೆ ಎಂದು ವರದಿಯಾಗಿದೆ.