ಮಂಗಳೂರು, ಏ : ಮೂಡುಬಿದಿರೆ ಕ್ಷೇತ್ರದಲ್ಲಿ, ಯುವ ಕಾಂಗ್ರೆಸ್ ನ ಅಧ್ಯಕ್ಷ ಮಿಥನ್ ರೈ ಗೆ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಮುಖಂಡರು ರಾಜೀನಾಮೆಗೆ ಮುಂದಾಗಿದ್ದಾರೆ. ಈ ಬಗ್ಗೆ ನಗರ ಖಾಸಗಿ ಹೊಟೇಲ್ ನಲ್ಲಿ ಏ. 17ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವ ತೀರ್ಮಾನ ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ನ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಗುಡ್ಡೆಗುತ್ಲು, ಕಳೆದ ಎರಡು ಮೂರು ವರ್ಷಗಳ ಹಿಂದಿನಿಂದ ಮೂಡುಬಿದಿರೆ-ಮುಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುಲಾಗುವುದೆಂದು ಹೈಕಮಾಂಡ್ ತಿಳಿಸಿತ್ತು. ಅದರಂತೆ ಮಿಥುನ್ ರೈ ಅವರು ಆ ಕ್ಷೇತ್ರದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ ಇದೀಗ ಟಿಕೆಟ್ ಕೈತಪ್ಪುವ ಮೂಲಕ ಅವರಿಗೆ ಅನ್ಯಾಯವಾಗಿದೆ. ಇದನ್ನು ಪ್ರತಿಭಟಿಸಿ ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿಲು ನಿರ್ಧರಿಸಿದ್ದೇವೆ ಎಂದರು.
ಸದ್ಯ ಮಿಥುನ್ ರೈಯವರು ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಗಾಗಿ ಅವರು ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸುವವರೆಗೆ ನಾವೆಲ್ಲಾ ತಟಸ್ಥ ನೀತಿ ಅನುಸರಿಸಲು ನಿರ್ಧರಿಸಿದ್ದೇವೆ. ಮಿಥುನ್ ರೈಯವರನ್ನು ಬೆಂಬಲಿಸುತ್ತಿದ್ದು ನಮ್ಮ ನೋವನ್ನು ಹೈಕಮಾಂಡ್ ಹಾಗೂ ರಾಜ್ಯದ ನಾಯಕರು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುದ್ದೇವೆ, ಎಂದು ಕಿರಣ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಸುಹೈಲ್ ಕಂದಕ್, ಮೆಲ್ವಿನ್ ರೇಗೊ, ಗಿರೀಶ್ ಆಳ್ವ, ಮುಹಮ್ಮದ್ ತೌಸೀಫ್, ಅಭಿನಂದನ್, ಪ್ರಶಾಂತ್ ಕುಲಾಲ್, ಸಿದ್ದೀಕ್, ಪ್ರಸಾದ್ ಮಲ್ಲಿ, ವರುಣ್ ರಾಜ್ ಮುಂತಾದವರು ಉಪಸ್ಥಿತರಿದ್ದರು.