ಏ,16: ತನ್ನ ಇಬ್ಬರು ಮಕ್ಕಳೊಂದಿಗೆ ಸೇರಿ ಗಂಡನನ್ನು ಬರ್ಬರವಾಗಿ ಹತ್ಯೆಗೈದು, ಶವವನ್ನು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಎಸೆದಿರುವ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಕರಡಿಹಳ್ಳಿ ಗ್ರಾಮದ ವೀರಭದ್ರ(55) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಆರೋಪಿಗಳಾದ ವೀರಭದ್ರರ ಪತ್ನಿ ಗಂಗಮ್ಮ ಮತ್ತು ಮಕ್ಕಳಾದ ಮಂಜುನಾಥ ಮತ್ತು ಮಂಗಳಾ ಎಂಬಾಕೆಯನ್ನು ಬಣಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೀರಭದ್ರ ಎಂಬವರನ್ನು ಎಪ್ರಿಲ್ 11ರಂದು ಕೊಲೆ ಮಾಡಿ ಬಳಿಕ ಕೊಲೆ ಸುಳಿವು ಸಿಗಬಾರದೆನ್ನುವ ಉದ್ದೇಶದಿಂದ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನ 100 ಅಡಿ ಆಳದ ಕಂದಕಕ್ಕೆ ಎಸೆದಿದ್ದರು. ಆದರೆ ಭಾನುವಾರ ಚಾರ್ಮಾಡಿ ಘಾಟ್ಗೆ ಬಂದಿದ್ದ ಚಾರಣಿಗರಿಗೆ ವೀರಭದ್ರ ಅವರ ಮೃತದೇಹ ದೊರಕ್ಕಿದ್ದರಿಂದ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮೃತದೇಹವನ್ನು ಮೇಲೆತ್ತಿರುವ ಬಣಕಲ್ ಪೊಲೀಸರು ಘಟನಾ ಸ್ಥಳಕ್ಕೆ ಬಂಧಿತ ಮೂವರು ಆರೋಪಿಗಳನ್ನ ಕರೆತಂದು ಮಹಜರು ನಡೆಸಿದ್ದಾರೆ. ಈ ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ.