ಚಿತ್ರ:ದಯಾ ಕುಕ್ಕಾಜೆ
ಮಂಗಳೂರು ಸೆ 21: ಕರಾವಳಿಯಾದ್ಯಂತ ನವರಾತ್ರಿ ಉತ್ಸವದ ಸಂಭ್ರಮ ಕಳೆಗಟ್ಟಿದೆ. ಸೆ. 21ರಿಂದ 30ರ ವರೆಗೆ ನವರಾತ್ರಿ ಉತ್ಸವಕ್ಕಾಗಿ ದೇವಸ್ಥಾನಗಳು ಸಜ್ಜಾಗಿದೆ. ಸಂಪೂರ್ಣ ನಗರವೇ ನವರಾತ್ರಿಯ ಸಡಗರಕ್ಕಾಗಿ ನವವಧುವಿನಂತೆ ಕಂಗೊಳಿಸುತ್ತಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಯಾಗ, ಪುನಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಂಗಳೂರು ದಸರಾ ಎಂದೇ ಜನಜನಿತವಾದ ಕುದ್ರೋಳಿಯ ಗೋಕರ್ಣನಾಥೇಶ್ವರ ಸನ್ನಿದಿಯಲ್ಲಿ ಕುದ್ರೋಳಿ ದೇಗುಲದಲ್ಲಿ ಸಾಂಪ್ರದಾಯಿಕ ಚೆಂಡೆವಾದನ, ಹುಲಿ ವೇಷದ ಮೆರವಣಿಗೆಯೊಂದಿಗೆ ಶಾರದಾ ಮಾತೆಯ ವಿಗ್ರಹ, ಗಣಪತಿ, ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಪ್ರಭಾ, ಕೂಷ್ಮಾಂಡಿನಿ, ಸ್ಕಂದಪುತ್ರಿ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿ ದಾತ್ರಿಯರ ವಿಗ್ರಹಗಳನ್ನು ಧಾರ್ಮಿಕ ಪೂಜಾವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಮಹಾಪೂಜೆ ನಡೆಸಲಾಯಿತು.
ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮಂಗಳೂರು ದಸರಾಕ್ಕೆ ಚಾಲನೆ ನೀಡಿ, ನಗರದ ಜನತೆಗೆ ನವರಾತ್ರಿಯ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮೇಯರ್ ಕವಿತಾ ಸನೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇನ್ನು ದೇವಾಲಯವಿಡೀ ಹೂವುಗಳಿಂದ, ವಿದ್ಯುದ್ದೀಪಗಳಿಂದ ಸರ್ವಾಲಂಕೃತಗೊಂಡು ಕಂಗೊಳಿಸುತ್ತಿದೆ.