ಮಂಗಳೂರು ಸೆ21: ಯಕ್ಷಗಾನ ಕೇವಲ ಒಂದು ಕಲೆಯಲ್ಲ. ಅದು ಸಿನಿಮಾದಂತೆ ಮನೋರಂಜನೆಗೆ ಸೀಮಿತವೂ ಅಲ್ಲ. ಕರಾವಳಿಯ ಸಂಸ್ಕೃತಿಯೊಂದಿಗೆ ಮಿಳಿತವಾಗಿರುವ ಯಕ್ಷಗಾನ ಅಂದರೆ ಬರಿಯ ನರ್ತನವಲ್ಲ, ಬರಿಯ ಗಾಯನವಲ್ಲ, ಸಂಭಾಷಣೆಯಿಂದ ಕೂಡಿದ ಅಭಿನಯವೂ ಅಲ್ಲ, ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ತನ್ನೆಲ್ಲ ವಿಶೇಷತೆಗಳನ್ನೂ ಸಮತೋಲನದಿಂದ ಸಮನ್ವಯಗೊಳಿಸಿ ರಂಗಪ್ರಯೋಗ ಮಾಡಲಾದ ಅದ್ಭುತ ಕಲೆ. ಇವಿಷ್ಟೇ ಅಲ್ಲದೆ ಕಟೀಲು,ಧರ್ಮಸ್ಥಳ ಮೊದಲಾದ ಮೇಳಗಳು ಹರಕೆಯ ರೂಪದಲ್ಲಿಯೇ ದೇವರ ಸೇವೆಯೆಂದು ಯಕ್ಷಗಾನವನ್ನು ಆಡಿಸಿಕೊಂಡು ಬರುವುದು ಸಾಮಾನ್ಯ.
ಇಂತಿಪ್ಪ ಯಕ್ಷಗಾನದಲ್ಲಿ ಸಿನಿಮಾರಂಗದಂತೆ ಲಿಪ್ ಲಾಕ್ ಕಾಲಿಟ್ಟಿದ್ದೂ, ಅದರ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಳೆದ ಕೆಲದಿನದ ಹಿಂದೆ ನಡೆದ ಯಕ್ಷಗಾನ ಒಂದರ ಶೃಂಗಾರ ಸನ್ನಿವೇಶದಲ್ಲಿ ಸಿನಿಮೀಯ ಶೈಲಿಯ " ಲಿಪ್ ಲಾಕ್ " ಪ್ರೇಕ್ಷಕರಿಗೆ ತೀವ್ರ ಮುಜುಗರ ಉಂಟು ಮಾಡಿದೆ.
ಅದೂ ಕೂಡ ಸಂಪ್ರದಾಯವಾದಿ ಕಟೀಲು ಮೇಳದ ಹಿರಿಯ ಕಲಾವಿದರೇ ಈ ವರ್ತನೆ ನಡೆಸಿದ್ದ ವಿಶಾಧನೀಯ ಹೀಗೆಂದು ಅದರ ಪರ ಹಾಗೂ ವಿರೋಧವಾಗಿ ಯಕ್ಷಗಾನ ರಂಗದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇನ್ನು ಈ ವೈರಲ್ ಆದ ಯಕ್ಷಗಾನ ವಿಡಿಯೋ ಕ್ಲಿಪ್ಪಿಂಗ್ಸ್ ಬಗ್ಗೆ ಯಕ್ಷಗಾನ ಕಲಾವಿದ ರಾಕೇಶ್ ರೈ ಅಡ್ಕ ಸ್ಪಷ್ಟೀಕರಣ ಕೊಟ್ಟಿದ್ದು ಹೀಗೆ..
" ಪದ್ಯವೊಂದಕ್ಕೆ ಅಭಿನಯಿಸುವಾಗ ಮೇಲ್ನೋಟಕ್ಕೆ ನಾನು ಸಹಕಲಾವಿದನ ಕೆನ್ನೆಗೆ ಮುತ್ತಿಕ್ಕುವಂತೆ ಕಂಡರೂ ವಾಸ್ತವದಲ್ಲಿ ನಡೆದಿರುವುದು ಬೇರೆ. ಎಷ್ಟೋ ಸಲ ಸಹಕಲಾವಿದರಲ್ಲಿ ಕಣ್ಸನ್ನೆಯ ಮೂಲಕವೋ ಆಂಗಿಕ ಸನ್ನೆಯ ಮೂಲಕವೋ ರಂಗದಲ್ಲಿಯೇ ಮುಂದಿನ ನಡೆ ಹೇಗೆ ಎನ್ನುವ ಸುಳಿವನ್ನು ನೀಡಬೇಕಾಗುತ್ತದೆ.ಮೊನ್ನೆಯ ನಾಟ್ಯವೈಭವದಲ್ಲಿಯೂ ನಡೆದಿರುವುದು ಅಷ್ಟೇ. ಭಾಗವತರಾದ ಶ್ರೀಯುತ ಪಟ್ಲ ಸತೀಶ್ ಶೆಟ್ಟರಿಂದ ಕಾರ್ಯಕ್ರಮವನ್ನು ಬೇಗ ಮುಗಿಸಬೇಕೆಂಬ ಸೂಚನೆ ನನಗೆ ಸಿಕ್ಕಿದ್ದರಿಂದ ಆ ಸೂಚನೆಯನ್ನು ಸಹಕಲಾವಿದರಾದ ಪ್ರಶಾಂತ್ ನೆಲ್ಯಾಡಿಯವರ ಗಮನಕ್ಕೆ ತರುವ ಅನಿವಾರ್ಯತೆ ನನಗಿತ್ತು. ಶೃಂಗಾರ ಪದ್ಯವೊಂದಕ್ಕೆ ಅಭಿನಯಿಸುತ್ತಾ ನಾನು ಸಹಕಲಾವಿದರ ಕಿವಿಯಲ್ಲಿ ಭಾಗವತರ ಸೂಚನೆಯನ್ನು ಉಸುರಿದ್ದೇ ಹೊರತು ಮುತ್ತಿಕ್ಕಿದ್ದಲ್ಲ.
ಹಾಗೆಂದು ಹಣೆಗೆ ಮುತ್ತಿಕ್ಕಿದ್ದನ್ನು ನಾನು ಅಲ್ಲಗಳೆಯುತ್ತಿಲ್ಲ. ನಾಟ್ಯಶಾಸ್ತ್ರ ಇದನ್ನು ಸಮರ್ಥಿಸುತ್ತದೋ ಇಲ್ಲವೋ ಎನ್ನುವುದಕ್ಕಿಂತಲೂ ಪಾತ್ರದ ಆತ್ಮೀಯತೆಯನ್ನು ಬಿಂಬಿಸುವಲ್ಲಿ ಇದು ಸಹಕಾರಿ ಎನ್ನುವ ಮನೋಭಾವದಿಂದ ಹಾಗೆ ಮಾಡಿದ್ದೇ ಹೊರತು ಅತಿರೇಕದಿಂದಲ್ಲ. ವೃತ್ತಿಪರ ಕಲಾವಿದನಾಗಿ , ಅದೆಷ್ಟೋ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿರುವ ಗುರುವಾಗಿ ರಂಗಪ್ರಜ್ನೆಯನ್ನು ಹೊಂದಿರದವನೇನು ನಾನಲ್ಲ. ಋಣಾತ್ಮಕವಾದ ವಿಷಯಗಳ ಕುರಿತಾಗಿ, ತೆಜೋವಧೆಯೇ ಮೂಲ ಉದ್ದೇಶವಾಗಿ ಚರ್ಚೆಗಿಳಿಯುವುದರಿಂದ ಯಕ್ಷಗಾನದ ಏಳಿಗೆಯಂತೂ ಸಾಧ್ಯವಿಲ್ಲ".