ಬಂಟ್ವಾಳ, ಏ 07: ಬಿಜೆಪಿ ಪಕ್ಷವು ಕಾಂಗ್ರೆಸ್ ಜೇನುಗೂಡಿಗೆ ಕೈ ಹಾಕುವ ಕೆಲಸ ಮಾಡುವುದರೊಂದಿಗೆ ನಮ್ಮನ್ನು ಪ್ರಚೋದಿಸುತ್ತಿದ್ದಾರೆ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸುಮಾರು 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಬೆಂಬಲಿತ ಇಬ್ಬರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರನ್ನು ಪಕ್ಷಾಂತರಗೊಳಿಸಿದ ಬಿಜೆಪಿಯು ಕಾಂಗ್ರೆಸ್ ಜೇನುಗೂಡಿಗೆ ಕೈ ಹಾಕುವ ಮೂಲಕ ನಮ್ಮನ್ನು ಪ್ರಚೋದಿಸಿದೆ. ಕಾಂಗ್ರೆಸ್ ಇದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಪಾಠ ಕಲಿಸಲಿದೆ ಎಂದು ಎಚ್ಚರಿಸಿದ್ದಾರೆ.
ನಾನು ಆರು ಬಾರಿ ಶಾಸಕನಾಗಿ, ವಿವಿಧ ಖಾತೆಗಳ ಸಚಿವನಾಗಿ ಅಭಿವೃದ್ಧಿ ಕೆಲಸಗಳ ಹಿನ್ನೆಲೆಯಲ್ಲಿ ಮತಯಾಚಿಸುತ್ತಿದ್ದೇನೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರಂತೆ ಹೆಸರಿಗೆ ಮಾತ್ರ ನಂಬರ್ 1 ಆಗಿರದೆ ಕೆಲಸದಲ್ಲಿ ನಂಬರ್-1 ಆಗಬೇಕು ಎಂದು ತಿಳಿಸಿದ್ದಾರೆ.