ಮಂಗಳೂರು, ಏ 6: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಸಚಿವ ಯುಟಿ ಖಾದರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿ ವಿವಾದ ಸೃಷ್ಟಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕೈರಂಗಳದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಗ್ರಾಹದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವಸ್ಥಾನ, ದೈವಸ್ಥಾನಗಳಿಗೆ ರಸ್ತೆ ಮಾಡಿಸಿ ಕೊಟ್ಟಿದ್ದಾರೆ ಎಂದು ಹೇಳಿ ಯುಟಿ ಖಾದರ್ ಅವರನ್ನು ದೇಗುಲದೊಳಗೆ ಕರೆದುಕೊಂಡು ಹೋಗುತ್ತಾರೆ. ಯುಟಿ ಖಾದರ್ ರಸ್ತೆ ಮಾಡಿಸಿದ್ದು ಅಪ್ಪ ಫರೀದನ ಹಣದಿಂದ ಅಲ್ಲ. ನಮ್ಮ ತೆರಿಗೆ ಹಣದಿಂದ ರಸ್ತೆ ಮಾಡಿಸಿರುವುದು ಎಂದು ಕಿಡಿ ಕಾರಿದ್ದಾರೆ.
ಗೋ ಮಾಂಸ ತಿನ್ನುವವನನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ. ಅದು ತಪ್ಪು ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಯುಟಿ ಖಾದರ್ ವರ್ತನೆಗೆ ಕಡಿವಾಣ ಹಾಕಬೇಕು. ಚುನಾವಣೆಯ ಸಂದರ್ಭದಲ್ಲಿ ದೈವಸ್ಥಾನಗಳಿಗೆ ಖಾದರ್ ಭೇಟಿ ಕೊಡುತ್ತಿದ್ದಾರೆ. ದೈವಸ್ಥಾನದಲ್ಲಿ ಕೋಲ ನೇಮೋತ್ಸವಗಳು ನಡೆಯುವಾಗ ಗಂಧ ಪ್ರಸಾದ ನೀಡುತ್ತಾರೆ. ತಲೆ ಸರಿ ಇರುವ ಯಾವುದೇ ವ್ಯಕ್ತಿಗಳು ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.