ಬೆಳ್ತಂಗಡಿ, ಏ 05: 94C ಯ ಅರ್ಜಿ ವಿಲೇವಾರಿಗೆ ಸಂಬಂದಪಟ್ಟಂತೆ ಲಂಚ ಪಡೆಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಏ.05 ರ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್ , ಎಸಿಬಿ ಬಲೆಗೆ ಬಿದ್ದವರು. ಪುತ್ತಿಲ ಗ್ರಾಮದ ಮಹಿಳೆಯೊಬ್ಬರಿಂದ 94/C ಅರ್ಜಿಯ ವಿಲೇವಾರಿ ಗೆ ಸಂಬಂಧಪಟ್ಟಂತೆ ಈಗಾಗಲೇ 3000 ಲಂಚ ಪಡೆದು ಮತ್ತೆ 5000 ಸಾವಿರ ಲಂಚ ಅಧಿಕಾರಿ ಸ್ವೀಕರಿಸುವ ವೇಳೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲೆಕ್ಕಾಧಿಕಾರಿ ಹರೀಶ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ: ಪುತ್ತಿಗೆ ಗ್ರಾಮದ ಮಹಿಳೆಯೊಬ್ಬರು 94/C ಅರ್ಜಿಯ ವಿಲೇವಾರಿ ಮಾಡುವಂತೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದು, ಆದರೆ ಕಳೆದ ಒಂದು ವರ್ಷದಿಂದ ಅರ್ಜಿಯನ್ನು ವಿಲೇವಾರಿ ಮಾಡದೆ ಲಂಚಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಈಗಾಗಲೇ 3000 ಲಂಚ ಪಡೆದು ಮತ್ತೆ 5000 ಸಾವಿರ ರೂಪಾಯಿ ನೀಡುವಂತೆ ಪೀಡಿಸುತ್ತಿದ್ದಾಗ ಅವರ ಸಹಾಯಕ್ಕೆ ಬಂದ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಬಂಗಾಡಿ ಎಸಿಬಿಗೆ ಹರೀಶ್ ವಿರುದ್ದ ದೂರು ಸಲ್ಲಿಸಿದ್ದರು. ದೂರನ್ನು ಸ್ವೀಕರಿಸಿದ ಎಸಿಬಿ ಅಧಿಕಾರಿಗಳು, ಮಹಿಳೆ ಕೈಯಿಂದ 5000 ಸಾವಿರ ಲಂಚ ಪಡೆಯುತ್ತಿದ್ದಾಗ ಎಸ್ಪಿ ಶೃತಿ ಎನ್ ಎಸ್ ನೇತೃತ್ವದಲ್ಲಿ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಡಿವೈಎಸ್ಪಿ ಸುಧೀರ್ ಹೆಗ್ಡೆ, ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಮೋಹನ್ ಕೊಟ್ಟಾರಿ ಹಾಗೂ ಸಿಬ್ಬಂದಿಗಳಾದ ಹರಿಪ್ರಸಾದ್, ಉಮೇಶ, ರಾಧಾಕೃಷ್ಣ ಕೆ ಹಾಗೂ ರಾಧಾಕೃಷ್ಣ ಡಿ ಎ, ಪ್ರಶಾಂತ್, ವೈಶಾಲಿ, ರಾಜೇಶ್, ರಾಕೇಶ್, ಗಣೇಶ್, ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.