ಮಂಗಳೂರು, ಏ 05 : ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಶೋಚನೀಯ ಘಟನೆ ನಡೆದಿದೆ. ಮೃತಳನ್ನು ಕೊಣಾಜೆ ಅಸೈಗೋಳಿ ನಿವಾಸಿ, ಮಂಗಳೂರಿನ ಸೈಂಟ್ ಆನ್ಸ್ ಹೈಸ್ಕೂಲ್ ಬೋಳಾರದ ವಿದ್ಯಾರ್ಥಿನಿ ಸ್ವೀಡಲ್ ಸ್ವೀಟಿ ಡಿ ಸೋಜ ಎಂದು ಗುರುತಿಸಲಾಗಿದೆ. ಈಕೆ ನಗರದ ರೊಸಾರಿಯೋ ಹೈಸ್ಕೂಲ್ನಲ್ಲಿ ಪರೀಕ್ಷೆ ಬರೆಯುತ್ತಿದ್ದು ಐದು ವಿಷಯಗಳ ಪರೀಕ್ಷೆಗಳನ್ನು ಬರೆದು ಪೂರ್ಣಗೊಳಿಸಿದ್ದಳು. ಬುಧವಾರ ಪರೀಕ್ಷೆ ಬರೆದು ಮನೆಗೆ ತೆರಳಿದ್ದ ಈಕೆಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸಾವಿಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಇಂದು ಸಂಜೆ 3.30ಕ್ಕೆ ಪಾಣೀರ್ ಚರ್ಚ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.