ಮಂಗಳೂರು, ಏ.4: ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದದ ಸಂಭಾಷಣೆ ರಾಜಕೀಯ ಪ್ರೇರಿತವಾಗಿತ್ತು ಎಂಬ ಕಾರಣ ನೀಡಿ ಅವರನ್ನು ಮುಂದಿನ ಪ್ರದರ್ಶನಗಳಿಗೆ ನಿಯೋಜಿಸದಂತೆ ಸೂಚಿಸಿ ಸ್ಥಳೀಯ ಚುನಾವಣಾಧಿಕಾರಿ ಜಾರಿಗೊಳಿಸಿದ್ದ ನೋಟಿಸ್ ಅನ್ನು ಆಯೋಗವೇ ವಾಪಾಸು ಪಡೆದುಕೊಂಡು ಪ್ರಕರಣವನ್ನು ಸುಖಾಂತ್ಯಗೊಳಿಸಿದೆ. ಕಲಾವಿದರ ವಿರುದ್ದ ಕಾನೂನು ಕ್ರಮಕ್ಕೆ ನೋಟಿಸ್ ನೀಡಿದ್ದು, ಇದು ತಪ್ಪು ಗ್ರಹಿಕೆಯಿಂದ ಆಗಿರುವ ಪ್ರಮಾದವಾಗಿರುವುದರಿಂದ ಯಕ್ಷಗಾನ ಕಲಾವಿದರಿಗೆ ನೀಡಿದ್ದ ನೋಟಿಸ್ ಅನ್ನು ಸ್ವತಃ ಚುನಾವಣಾ ಅಧಿಕಾರಿಯೇ ವಾಪಾಸ್ ಪಡೆದುಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ‘ಇವನರ್ವ’ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಕೆ ಮಾಡಿದುದಕ್ಕೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಯಕ್ಷಗಾನ ಕಲಾವಿದನ ವಿರುದ್ಧ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತ್ತು. ಮಾ. 24 ರಂದು ಕಾಸರಗೋಡಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಪೂರ್ಣೇಶ್ ಭಾಗವಹಿಸಿದ್ದು, ಆದರೆ ಚುನಾವಣಾ ಆಯೋಗ ಏ 1 ರಂದು ಪಡು ಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ನಡೆದ ಕಾರ್ಯಕ್ರಮ ಎಂದು ಉಲ್ಲೇಖಿಸಿತ್ತು. ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೂರ್ಣೇಶ್ ಅಂದು ಪಡುಮಾರ್ನಾಡಿನಲ್ಲಿ ಒಂದನೇ ಮೇಳ ಮತ್ತು ಸುಳ್ಯದ ಐವರ್ನಾಡಿನಲ್ಲಿ 6ನೆ ಮೇಳ ನಡೆಯುತ್ತಿತ್ತು. ತಾನು ಅಂದು ಐವರ್ನಾಡಿನ ಮೇಳದಲ್ಲಿದ್ದೆ. ಮಾ.24ರಂದು ಕೇರಳದ ಮಾನ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ನಾನು ಈ ಹೇಳಿಕೆಯನ್ನು ಉಲ್ಲೇಖಿಸಿದ್ದೆ. ಅಂದು ಚುನಾವಣಾ ದಿನಾಂಕ ಘೋಷಣೆಯಾಗಿರುವುದಿಲ್ಲ. ಅಲ್ಲದೆ, ಈ ಹೇಳಿಕೆಯನ್ನು ಕೇರಳದಲ್ಲಿ ನೀಡಿದ ಕಾರಣ ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ ಮತ್ತು ಇದು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಎಂದು ತಿಳಿಸಿದ್ದಾರೆ.