ಮಂಗಳೂರು, ಏ 05 : ಆಸ್ಟ್ರೇಲಿಯಾದ ಗೋಲ್ಟ್ ಕೋಸ್ಚ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಶುಭಾರಂಭ ಮಾಡಿದ್ದು, ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಟೂರ್ನಿಯ ಮೊದಲ ಪದಕ ಲಭಿಸಿದೆ. ಪುರುಷರ 56 ಕೆಜಿ ವಿಭಾಗದಲ್ಲಿ ಭಾರತದ ಗುರುರಾಜ್ ಅವರು ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡು ಬೀಗಿದ್ದಾರೆ. ಪಂದ್ಯದಲ್ಲಿ ಒಟ್ಟು ಮೂರು ಸುತ್ತಿನಲ್ಲಿ ಗುರುರಾಜ ಒಟ್ಟು 249 ಕೆಜಿ ತೂಕ ಎತ್ತುವ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಇನ್ನು ಇದೇ ವಿಭಾಗದಲ್ಲಿ ಒಟ್ಟು 261 ಕೆಜಿ ತೂಕ ಎತ್ತಿದ ಮಲೇಷ್ಯಾದ ವೇಟ್ ಲಿಫ್ಟರ್ ಮಹಮದ್ ಇಜಾರ್ ಅಹ್ಮದ್ ಚಿನ್ನದ ಪದಕ ಗೆದ್ದಿದ್ದು, 248 ಕೆಜಿ ತೂಕ ಎತ್ತಿದ ಶ್ರೀಲಂಕಾದ ವೇಟ್ ಲಿಫ್ಟರ್ ಲಕ್ಮಲ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ನಿನ್ನೆಯಷ್ಟೇ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ 2018 ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ದೊರಕ್ಕಿತ್ತು.
ಗುರುರಾಜ್ ಅವರು ಕುಂದಾಪುರದ ವಂಡ್ಸೆ ಸಮೀಪದ ಚಿತ್ತೂರಿನ ನಿವಾಸಿ, ಮಹಾಬಲ ಪೂಜಾರಿ - ಪದ್ದು ಪೂಜಾರಿ ದಂಪತಿಯ ೬ ಪುತ್ರರಲ್ಲಿ ಐದನೆಯವರು ಇವರು. ತಂದೆ ವೃತ್ತಿಯಲ್ಲಿ ಪಿಕಪ್ ಚಾಲಕ. ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅಲ್ಲಿನ ಕೋಚ್ ರಾಜೇಂದ್ರ ಪ್ರಸಾದ್ ಗರಡಿಯಲ್ಲಿ ಪಳಗಿದ ಇವರು ಅಂತಾರಾಷ್ಟ್ರೀಯ ಮಟ್ಟದ ವೇಟ್ ಲಿಫ್ಟಿಂಗ್ನಲ್ಲಿ ಅನೇಕ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಗುರುರಾಜ್ ಸಾಧನೆಗೆ ಇತ್ತೀಚೆಗೆ ರಾಜ್ಯ ಸರಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಧ್ಯ ಗುರುರಾಜ್ ಅವರು ಭಾರತೀಯ ವಾಯುಸೇನೆಯ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.