ಕುಂದಾಪುರ, ಏ 03 : ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಇತ್ತೀಚೆಗಿನ ಕ್ಷಿಪ್ರ ಬೆಳವಣಿಗೆಯಲ್ಲಿ ಕುಂದಾಪುರ ಕ್ಷೇತ್ರದಾಧ್ಯಂತ ಮಿಂಚಿನ ತಿರುಗಾಟ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಗೆ ಭಾಜಪದಿಂದ ಅವರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದಲ್ಲಿ ಅದು ಕಷ್ಟ ಸಾಧ್ಯ ಎನ್ನಲಾಗುತ್ತಿದ್ದು, ಹೆಗ್ಡೆ ಅವರು ಕುಂದಾಪುರ ಕ್ಷೇತ್ರದಲ್ಲಿ ತಿರುಗಾಟದ ವೇಗವನ್ನು ಹೆಚ್ಚಿಸಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
ಹೆಗ್ಡೆ ಅವರು ಕುಂದಾಪುರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆ ನೆಲೆಯಲ್ಲಿ ಅವರು ತಿರುಗಾಟ ಮಾಡುತ್ತಿದ್ದರೆ ಅಥವಾ ಬಿಜೆಪಿ ಅಭ್ಯರ್ಥಿ ಪರ ಬಲವರ್ಧನೆಗೆ ತಿರುಗಾಟ ಮಾಡುತ್ತಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಮನೆ ಮನೆ ಭೇಟಿ ಮಾಡುವ ಮೂಲಕ ಹೆಗ್ಡೆ ಕುಂದಾಪುರದ ಹಳ್ಳಿ ಹಳ್ಳಿಗಳಲ್ಲಿ ತಿರುಗಾಟದ ಮೂಲಕ ಸುದ್ಧಿಯಾಗುತ್ತಿದ್ದಾರೆ. ಈ ಹಿಂದೆ ಜಯಪ್ರಕಾಶ್ ಹೆಗ್ಡೆ ಅವರು ಬೈಂದೂರು ಕ್ಷೇತ್ರದಲ್ಲಿಯೂ ಬೆಂಬಲಿಗರ ಜೊತೆ ತಿರುಗಾಟ ಮಾಡಿದ್ದರು. ನಂತರ ಅದನ್ನು ನಿಲ್ಲಿಸಿ ಕುಂದಾಪುರ ಕ್ಷೇತ್ರದಲ್ಲಿ ಮತದಾರರ ಭೇಟಿ ಆರಂಭಿಸಿದ್ದಾರೆ.
ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಟಿಕೆಟು ನೀಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ಬಿಜೆಪಿ ಇನ್ನೊಂದು ಬಣ ಹಾಲಾಡಿ ಅವರಿಗೆ ಟಿಕೆಟು ನೀಡುವುದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದೆ. ಅಂದರೆ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ಕೊಡುವುದಕ್ಕೆ ಆ ಬಣದ ಸ್ವಾಗತವಿದೆ. ಒಟ್ಟಾರೆಯಾಗಿ ಕುಂದಾಪುರ ಬಿಜೆಪಿಯಲ್ಲಿ ಮಾಜಿ ಶಾಸಕ ಮಾಜಿ ಸಂಸದರು ಟಿಕೆಟ್ನ ಆಕಾಂಕ್ಷಿಗಳಾಗಿರುವುದು ಸ್ಪಷ್ಟ.
ಬಿಜೆಪಿಯ ಎರಡು ಬಣಗಳ ನಡುವಿನ ಅಭಿಪ್ರಾಯ ಬೇಧ ಸಾಕಷ್ಟು ಗೊಂದಲಗಳನ್ನು ಹುಟ್ಟು ಹಾಕಿದೆ. ಜಯಪ್ರಕಾಶ್ ಹೆಗ್ಡೆ, ಬಿ.ಕಿಶೋರ್ ಕುಮಾರ್, ರಾಜೇಶ ಕಾವೇರಿ ಸಹಿತ ಒಂದಿಷ್ಟು ಬಿಜೆಪಿ ಮುಖಂಡರು ಪ್ರತ್ಯೇಕವಾಗಿ ಕುಂದಾಪುರ ಕ್ಷೇತ್ರದಲ್ಲಿ ಮನೆ ಭೇಟಿ ಮಾಡುತ್ತಿರುವುದನ್ನು ಬಿಜೆಪಿಯ ಇನ್ನೊಂದು ಬಣ ವಿರೋಧಿಸುತ್ತಿದೆ. ಆದರೆ ಕಿಶೋರ್ ಅವರ ತಂಡ ನಾವು ಬಿಜೆಪಿಯ ಬಲವರ್ಧನೆ ವಿಚಾರದಲ್ಲಿ ಮತದಾರರ ಭೇಟಿ ಮಾಡುತ್ತಿದ್ದೇವೆ ಎನ್ನುತ್ತಿದೆಯಾದರೂ ಇನ್ನೊಂದು ಬಿಜೆಪಿಯ ತಂಡ ಅದನ್ನು ಒಪ್ಪುತ್ತಿಲ್ಲ. ಹಾಗಾಗಿಯೇ ಬಾಜಪದೊಳಗಿನ ಅಸಮಾಧಾನ ಕುಂದಾಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದೆ.
ಯಾವುದಕ್ಕೂ ನಿಖರ ಉತ್ತರ ಹಾಗೂ ಪರಿಹಾರ ಬಿಜೆಪಿ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕವಷ್ಟೆ ತಿಳಿಯಲಿದೆ.