ಮಂಗಳೂರು, ಏ. 4: ಕರಾವಳಿಯಲ್ಲಿ ಪ್ರಚಾರದ ಪರ್ವ ಜೋರಾಗಿದ್ದು, ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಲು ಬಿಜೆಪಿ ಪಕ್ಷ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ.
ಕರಾವಳಿಯ ಜಿಲ್ಲೆಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಂದು ಸುತ್ತಿನ ಚುನಾವಣಾ ಪ್ರಚಾರ ಪ್ರವಾಸ ಮುಗಿಸಿ ತೆರಳಿದ್ದಾರೆ. ಇನ್ನೊಂದೆಡೆ ಬಿಜೆಪಿ ಜನಸುರಕ್ಷಾ ಯಾತ್ರೆ ನಡೆಸಿ ಯಶಸ್ವಿಯಾಗಿದೆ. ಒಂದೆಡೆ ಬಿಜೆಪಿ ಕರಾವಳಿ ಜಿಲ್ಲೆಗಳಲ್ಲಿ ಚುನಾವಣಾ ರಣತಂತ್ರ ಹೆಣೆಯುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ.
ಬಿಜೆಪಿ ಪಕ್ಷದ ಉನ್ನತ ನಾಯಕರು ಸೂಚನೆ ನೀಡಿರುವಂತೆ, ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಉಭಯ ಜಿಲ್ಲೆಯ 9 ಕ್ಷೇತ್ರಗಳಲ್ಲಿಯೂ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಬಿಜಪಿ ಪಕ್ಷ ನಿರ್ಧರಿಸಿದೆ. ಈ ಹಿಂದೆ ಕೆಲವೇ ಕೆಲವು ಅಂತರದಿಂದ ಸೋತವರಿಗೆ, ಮಾಜಿ ಶಾಸಕರಿಗೆ ಟಿಕೆಟ್ ನೀಡುತ್ತಿದ್ದರು. ಆದರೆ ಈ ಬಾರಿ ಹಾಲಿ ಶಾಸಕರಿಗೆ ಮಾತ್ರ ಪಕ್ಷದಲ್ಲಿ ಟಿಕೆಟ್ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ಪಕ್ಷದ ಹಾಲಿ ಶಾಸಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ. ಸುಳ್ಯದಲ್ಲಿ ಅಂಗಾರ ಹಾಗೂ ಕಾರ್ಕಳದಲ್ಲಿ ಸುನೀಲ್ ಕುಮಾರ್ ಅವರಿಗೆ ಟಿಕೆಟ್ ಸಿಗಲಿದೆ. ಉಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಹೊಸ ಮುಖಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಜಾತಿವಾರು ಲೆಕ್ಕಾಚಾರವನ್ನು ಇಟ್ಟುಕೊಳ್ಳಲಿರುವ ಬಿಜೆಪಿ ಪಕ್ಷ, ಟಿಕೆಟ್ ಸಿಗದೆ ಅತೃಪ್ತರಾಗಿರುವ, ಟಿಕೆಟ್ ಅಸಂಭವ ಎನ್ನಲಾದ ಆಕಾಂಕ್ಷಿಗಳನ್ನು ಬೆಂಗಳೂರಿಗೆ ಕರೆಸಿ ಸಮಾಧಾನ ಪಡಿಸುವ ಕಾರ್ಯವನ್ನು ನಡೆಸುತ್ತಿದೆ.