ಉಡುಪಿ, ಏ 03 : ಸುದ್ದಿ ಮಾಧ್ಯಮಗಳಿಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬರೆದ ಪತ್ರಕ್ಕೆ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರಿಂದ ಉತ್ತರ ಬಂದಿದೆ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಅವರು ಪತ್ರಿಕಾ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿ, ಮಾ.15 ರಂದು ತಡರಾತ್ರಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ಪ್ರೀಯ ತೀರ್ಥ ಸ್ವಾಮೀಜಿ ,ಕಿರಿಯ ಶ್ರೀ ಈಶ ಪ್ರೀಯ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವ ವಲ್ಲಭ ತೀರ್ಥ ಸ್ವಾಮೀಜಿ ಸಭೆ ನಡೆಸಿದ್ದೆವು. ಈ ಸಭೆಯಲ್ಲಿ ಶ್ರೀಗಳ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಹೀಗಾಗಿ ಶಿರೂರು ಮಠಕ್ಕೆ ನೋಟಿಸ್ ನೀಡಲಾಗಿತ್ತು. ಆದರೆ ಇದೀಗ ಪತ್ರಕ್ಕೆ ಉತ್ತರ ಬಂದಿದೆ ಎಂದರು. ಆದರೆ ಪತ್ರದಲ್ಲಿ ಇರುವ ವಿವರ ಬಹಿರಂಗಪಡಿಸಲು ಮಾತ್ರ ನಿರಾಕರಿಸಿದರು. ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ನೀಡಿದ ಉತ್ತರದ ಬಗ್ಗೆ ಯತಿಗಳು ಸೇರಿ ಚರ್ಚಿಸಿ ಸೂಕ್ತ ನಿರ್ಧಾರ ತಳೆಯಲಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು .
ಇನ್ನೊಂದೆಡೆ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಅಥವಾ ಪಕ್ಷೇತರನಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದು ಏ.8ರಿಂದ ಮಲ್ಪೆ ವಡಭಾಂಡೇಶ್ವರದಿಂದ ಪ್ರಚಾರ ಆರಂಭಿಸಲಿದ್ದಾರೆ.