ಬೆಂಗಳೂರು, ಏ 03: ಕಾಂಗ್ರೆಸ್ ಪಕ್ಷಕ್ಕೆ ಪುತ್ರ ವ್ಯಾಮೋಹ ಜಾಸ್ತಿ - ಪಾಂಡವರ ನಡುವಿನ ಕೌರವರ ಯುದ್ಧದಲ್ಲ್ಲಿ ಗೆಲುವು ಪಾಂಡವರದ್ದು. ಹೀಗಾಗಿ ಶೀಘ್ರದಲ್ಲಿ ಕೌರವರ ವಧೆಯಾಗಲಿದ್ದು ಕಾಂಗ್ರೆಸ್ಗೆ ಇನ್ನೂ ದೊಡ್ಡ ಶಾಕ್ ಕಾದಿದೆ ಎಂದು ಸಧ್ಯದಲ್ಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿರುವ ಶಾಸಕ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್, ಮಹಾಭಾರತದ ಯುಗದಲ್ಲಿ ಧೃತರಾಷ್ಟ್ರ ಪುತ್ರ ಪ್ರೇಮದಿಂದ ದುರ್ಯೋಧನನಿಗೆ ಪಟ್ಟ ದೊರಕಿತು. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನ ಮೇಲೆ ವ್ಯಾಮೋಹದಿಂದ ಅಧಿಕಾರ ಕೊಡಿಸಿದ್ದಾರೆ. ಜನರು ಈ ಬಗ್ಗೆ ನಿರ್ಧರಿಸಲಿದ್ದು, ಯಾರನ್ನು ಗೆಲ್ಲಿಸುತ್ತಾರೆ, ಯಾರನ್ನು ಸೋಲಿಸುತ್ತಾರೆ ಎಂಬುದನ್ನು ನೋಡೋಣ ಎಂದರು. ಕಾಂಗ್ರೆಸ್ ಪಕ್ಷಕ್ಕ್ವೆ ಕೆಲವೇ ದಿನದಲ್ಲಿ ದೊಡ್ಡ ಶಾಕ್ ಸಿಗಲಿದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ನಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ. ಅದ್ದರಿಂದಲೇ ಏ.8ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ನಾನು ಸೇರಿದಂತೆ ಇನ್ನಷ್ಟು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಲಿದ್ದೇವೆ ಎಂದು ಹೇಳಿದರು.