ತುಮಕೂರು ಏ 1: ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರು ಇಂದು 111ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕಾಯಕ ಯೋಗಿ, ಅಭಿನವ ಬಸವಣ್ಣ, ಮಹಾನ್ ಮಾನವತಾವಾದಿ,ಹಾಗೂ ನಡೆದಾಡುವ ದೇವರೆಂದೇ ಖ್ಯಾತಿ ಗಳಿಸಿದ ಸ್ವಾಮೀಜಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಮಠದಲ್ಲಿ ಭಾರೀ ಸಿದ್ಧತೆಗಳನ್ನು ನಡೆಸಲಾಗಿದ್ದು, ಮಠ ಹಾಗೂ ಇಡೀ ತುಮಕೂರು ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಶ್ರೀಗಳ ಜನ್ಮದಿನೋತ್ಸವ ಹಾಗೂ ಗುರುವಂದನಾ ಸಮಾರಂಭಕ್ಕೆ ಶ್ರೀಮಠದಲ್ಲಿ ಸಕಲ ಸಿದ್ದತೆ ಗಳು ನಡೆದಿದ್ದು ಸಮಾರಂಭಕ್ಕೆ ಆಗಮಿಸುವ ವಿವಿಧ ಮಠಾಧೀಶರು, ಭಕ್ತಾಧಿಗಳು ಸೇರಿದಂತೆ ಗಣ್ಯಾತಿ ಗಣ್ಯರನ್ನು ಸ್ವಾಗತಿಸಲು ಶ್ರಿ ಕ್ಷೇತ್ರ ಸಜ್ಜಾಗಿದೆ. ರಸ್ತೆಯುದ್ದಕ್ಕೂ ಸ್ವಾಮೀಜಿಗಳ ಕಟೌಟ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಸಂಘ ಸಂಸ್ಥೆಗಳು, ಸ್ವಯಂಸೇವಕರು, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ತುಮಕೂರು ನಗರದ ಜನ ಸ್ವಯಂಪ್ರೇರಿರಾಗಿ ಮಠಕ್ಕೆ ಆಗಮಿಸಿ ಮಠದ ಕೆಲಸದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ವಿಶೇಷ.
ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸುತ್ತಿರುವ ಹಿನ್ನಲೆಯಲ್ಲಿ 9 ಕಡೆ ಪ್ರಸಾದ ವ್ಯವಸ್ಥೆಗಳನ್ನು ಮಾಡಿದ್ದಾರೆ. ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಪ್ರಸಾದ ಸೇವೆ ಆರಂಭವಾಗಿದ್ದು, ರಾತ್ರಿ 11ರವರೆಗೆ ನಿರಂತರವಾಗಿ ನಡೆಯಲಿದೆ.