ಮಂಗಳೂರು. ಏ 1 : ಪ್ರಯಾಣಿಕರ ಸೋಗಿನಲ್ಲಿ ಬಂದಿದ್ದ ನಾಲ್ವರು ಅಪರಿಚಿತರು ಕಾರೊಂದನ್ನು ಬಾಡಿಗೆ ಪಡೆದು ಬಳಿಕ ದಾರಿ ಮಧ್ಯೆ ಚಾಲಕನ ಕೈ ಕಾಲು ಕಟ್ಟಿ ಹಾಕಿ ಕಾರು ದರೋಡೆ ನಡೆಸಿದ ಘಟನೆ ಮಾ 31 ಶನಿವಾರ ನಡೆದಿದೆ. ಶುಕ್ರವಾರದಂದು ಪುತ್ತೂರು ಪಡೀಲು ನಿವಾಸಿ ಪ್ರಕಾಶ್ ಎಂಬವರ ಸ್ವಿಫ್ಟ್ ಡಿಸೈರ್ ಕಾರನ್ನು ಮಂಗಳೂರಿನ ಲಾಲ್ ಬಾಗ್ ಬಳಿಯಿಂದ ಬಾಡಿಗೆ ಪಡೆದು ಪಡುಬಿದ್ರೆಗೆ ತೆರಳುವಂತೆ ನಾಲ್ವರು ಅಪರಿಚಿತರು ಸೂಚಿಸಿದ್ದು. ಆದರೆ ಪ್ರಯಾಣದ ನಡು ದಾರಿಯಲ್ಲಿ ಈ ಅಪರಿಚಿತರು ಚಾಲಕ ಪ್ರಕಾಶ್ ಅವರನ್ನು ಬೆದರಿಸಿ ಕೈ ಕಾಲು ಕಟ್ಟಿ ಹಾಕಿ ಕಾರಿನ ದಾಖಲೆ ಪತ್ರಗಳ ಸಮೇತ ಕಾರು ಹಾಗೂ ಮೊಬೈಲ್ ದರೋಡೆ ನಡೆಸಿದ್ದಾರೆ.
ಶನಿವಾರ ಬೆಳಿಗ್ಗೆ ಸೀತಾನದಿ ಸಮೀಪ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಕಾಶ್ ಅವರನ್ನು ಗಮನಿಸಿದ ಹಾಲಿನ ಗಾಡಿಯವರು ನೋಡಿ ಹಗ್ಗ ಬಿಚ್ಚಿಸಿ ಮಾನವೀಯತೆ ಮೆರೆದಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ತನ್ನ ಸಂಬಂಧಿಕರೊಂದಿಗೆ ಮಂಗಳೂರಿಗೆ ಹಿಂತಿರುಗಿದ ಪ್ರಕಾಶ್ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.