ಸುಪ್ರೀತಾ ಸಾಲ್ಯಾನ್, ಪಡು
ನಗಿಸುವುದು ಒಂದು ಕಲೆ. ಅ ಕಲೆ ಎಲ್ಲರಿಗೂ ಅಷ್ಟು ಸುಲಭವಾಗಿ ಒಲಿಯುವಂಥದಲ್ಲ.. ಒಂದು ವೇಳೆ ಹಾಗಿರುತ್ತಿದ್ದರೆ ಇವತ್ತು ನಮ್ಮ ನಡುವೆ ಅದೆಷ್ಟೋ ಚಾರ್ಲಿ ಚಾಪ್ಲಿನ್ಗಳು ಇರುತ್ತಿದ್ದರು. ತಮ್ಮ ಹಾಸ್ಯ ನಟನೆಯ ಮೂಲಕ ಎಲ್ಲರನ್ನು ಹೊಟ್ಟೆಹುಣ್ಣಾಗಿಸುವಂತೆ ನಗಿಸುವ ಸಾಮರ್ಥ್ಯವಿರುವ ಅನೇಕ ದಿಗ್ಗಜ ನಟರು ನಮ್ಮ ನಡುವೆ ಇದ್ದಾರೆ. ಅಂಥವರ ಸಾಲಿಗೆ ಸೇರ್ಪಡೆಯಾಗುವ ಸಾಮರ್ಥ್ಯವಿರುವ ಪ್ರತಿಭೆಯೊಬ್ಬರು ನಮ್ಮ ಕರಾವಳಿಯಲ್ಲಿ ಇದ್ದಾರೆ ಅನ್ನೋದು ನಮ್ಮ ಹೆಮ್ಮೆ. ಅವರೇ ಧೀರಜ್ ನೀರುಮಾರ್ಗ... ಹಾಸ್ಯ ಇವರ ಬದುಕು.. ನಟನೆ ಇವರ ಉಸಿರು... ಸ್ತ್ರೀ ಪಾತ್ರ ಇವರಿಗೆ ಮೋಸ್ಟ್ ಫೇವರೇಟು... ಇವರ ನಟನಾ ಸಾಮರ್ಥ್ಯಕ್ಕೆ ಶಹಬ್ಬಾಸ್ ಅನ್ನದವರು ಯಾರೂ ಇಲ್ಲ...
ವಯಸ್ಸು 23. ಅದಾಗಲೇ ಕಲಾರಂಗದಲ್ಲಿ ಗುರುತಿಸಿಕೊಂಡಿದೆ ಇವರ ಹೆಸರು.. ಎಳೆಯ ವಯಸ್ಸಿನಿಂದಲೇ ನಟನೆಯಲ್ಲಿದ್ದ ಅತೀವ ತುಡಿತ, ಕಲೆಯ ಮೇಲಿದ್ದ ಅಪಾರ ಪ್ರೀತಿ ಇಂದು ಇವರನ್ನು ಜನಪ್ರಿಯ ಖಾಸಗಿ ವಾಹಿನಿಯಲಿ ಪ್ರಸಾರವಾಗುತ್ತಿರುವ ‘ಕಾಮಿಡಿ ಕಿಲಾಡಿಗಳು ವೇದಿಕೆಯವರೆಗೂ ಕೊಂಡೊಯ್ದಿದೆ. ತನ್ನ ಹಾಸ್ಯ ರಸಾಯನದಿಂದ ಜನಮಾನಸದಲ್ಲಿ ಇವರು ಅಚ್ಚೊತ್ತಿ ನಿಂತಿದ್ದಾರೆ. ಮಂಗಳೂರು ಸಮೀಪದ ನೀರ್ಮಾರ್ಗದ ದಿ. ಜನಾರ್ದನ ಬಿ ಮತ್ತು ಯಶೋಧ ಬಿ ದಂಪತಿಯ ಪುತ್ರನಾದ ಇವರು ತನ್ನ 10 ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಎಂಟ್ರಿ ನೀಡಿದವರು. ನಾಟಕ ಕ್ಷೇತ್ರಕ್ಕೆ ಕಾಲಿಡಲು ಮನೆಯಲ್ಲಿ ತಂದೆ ತಾಯಿಯ ಜೊತೆಗೆ ಇಡೀ ಕುಟುಂಬದ ವಿರೋಧವಿದ್ರೂ, ಕಲಾ ಮಾತೆ ಶಾರದೆ ಮಾತ್ರ ಇವರ ಕೈ ಬಿಡಲಿಲ್ಲ. ಅಡ್ಯಾರ್ ಪದವಿನ ರಾಜರಾಜೇಶ್ವರಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಏಕಪಾತ್ರಭಿನಯ, ಮೂಕಪಾತ್ರಭಿನಯ, ನಾಟಕ, ಮಿಮಿಕ್ರಿ ಹೀಗೆ ಅನೇಕ ಕಲಾ ಪ್ರಕಾರಗಳಲ್ಲಿ ಮುಂದಿದ್ದ ಧೀರಜ್ ಪ್ರತಿಭಾವಂತ ವಿದ್ಯಾರ್ಥಿ.
ಈ ಕಲಾವಿದನ ಕಲೆಯ ಮೇಲಿನ ಹಸಿವನ್ನು ತಣಿಸಿದ್ದು ಗುರುಗಳಾದ ಮಧು ಬಂಗೇರ ಕಲ್ಲಡ್ಕ. 10 ನೇ ವಯಸ್ಸಿನಲ್ಲಿ ರಂಗಭೂಮಿಯ ಹೆಸರಾಂತ ಕಲಾವಿದರಾದ ಅರುಣ್ ಚಂದ್ರ ಬಿ.ಸಿ ರೋಡ್ ಮತ್ತು ರಾಜೇಶ್ ಮುಗುಳಿ ಆಶೀರ್ವಾದದೊಂದಿಗೆ ರಂಗಭೂಮಿಗೆ ಇಳಿದ ಇವರು ತುಳುವೆರೆ ತುಡರ್ ಕಲಾತಂಡವನ್ನು ಸೇರಿಕೊಂಡು ಕಲಾಸೇವೆಯನ್ನು ಪ್ರಾರಂಭಿಸಿದರು. ಕಲಿಕೆಯ ನಡುವೆಯೇ ಈ ತಂಡದ ಖಾಯಂ ಕಲಾವಿದನಾಗಿ, ವಿಶೇಷವಾಗಿ ಹಾಸ್ಯ ಪಾತ್ರದಲ್ಲಿ ಅಭಿನಯಿಸಿ ಜನರ ಮನಸ್ಸು ಗೆದ್ದಿದ್ದಾರೆ. ರಂಗಭೂಮಿಯಲ್ಲಿ ಸುಮಾರು 25 ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿ, 1000 ಕ್ಕೂ ಮಿಕ್ಕಿ ಪ್ರದರ್ಶನ ನೀಡಿದ್ದಾರೆ. ‘ಕೊಪ್ಪರಿಗೆ, ‘ಕನ ಕಟ್ಟೊಚ್ಚಿ , ‘ಏರಾ ಉಲ್ಲೆರ್ ಈ ಇಲ್ಲಲ್ , ‘ಇನಿ ಅತ್ತ್ಂಡ ಎಲ್ಲೆ’ನಾಟಕ, ಇವರ ಅಭಿನಯ ಚಾತುರ್ಯ ತೋರಿಸಿದ ನಾಟಕಗಳು.
ಮಂಗಳೂರಿನ ಸ್ಥಳೀಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ‘ಬಲೆ ತೆಲಿಪಾಲೆ’ಯಲ್ಲಿಯೂ ಇವರು ತಮ್ಮ ಛಾಪು ತೋರಿದ್ದು , ಹಾಸ್ಯ ಪಾತ್ರದ ಮೂಲಕ ಜನರನ್ನು ನಗೆ ಕಡಲಲ್ಲಿ ತೇಲಿಸಿದ್ದಾರೆ. ರಂಗಭೂಮಿಯ ಹಾಸ್ಯ ರತ್ನ ಪ್ರವೀಣ್ ಮರ್ಕಮೆ ನೇತ್ರತ್ವದ ಕುಸಾಲ್ದ ಕುರ್ಲರಿ ಬಲೆ ತೆಲಿಪಾಲೆ ತಂಡದೊಂದಿಗೆ ರಾಜ್ಯ ಹೊರ ರಾಜ್ಯಗಳಲ್ಲಿಯೂ ತನ್ನ ಪ್ರತಿಭಾ ಕಂಪು ಸೂಸಿದ್ದಾರೆ.
ಯಕ್ಷರಂಗದಲ್ಲಿಯೂ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವುದರಲ್ಲಿ ಈ ಕಲಾವಿದ ಪ್ರವೀಣ. ಗುರುಗಳಾದ ಸುರೇಶ್ ಕೊಲೆಕಾಡಿ ಅವರಿಂದ ಕಾಲಿಗೆ ಗೆಜ್ಜೆ ಕಟ್ಟಿಸಿಕೊಂಡ ಧೀರಜ್ 5 ಕ್ಕೂ ಮಿಕ್ಕಿ ಪ್ರಸಂಗಗಳಿಗೆ ಬಣ್ಣ ಹಚ್ಚಿದ್ದಾರೆ. ಯಕ್ಷರಂಗದಲ್ಲಿ ದೈವರಾಜ ಬಬ್ಬು ಸ್ವಾಮಿ ಪ್ರಸಂಗವೂ ಇವರಿಗೆ ಉತ್ತಮ ಹೆಸರು ತಂದುಕೊಟ್ಟಿದೆ.
ಸಿ - ಟೌನ್ನಲ್ಲಿಯೂ ಗುರುತಿಸಿಕೊಂಡಿರುವ ಧೀರಜ್, ಅಶ್ವಿನಿ ಹರೀಶ್ ನಾಯಕ್ ನಿರ್ದೇಶನದ ‘ನಮ್ಮ ಕುಡ್ಲ’ ಚಿತ್ರದಲ್ಲಿ ನಟಿಸಿ ಹಾಸ್ಯ ಪೂರಿತ ನಟನೆಯಿಂದ ಕಲಾಭಿಮಾನಿಗಳ ಮನ ಗೆದ್ದಿದ್ದಾರೆ. ಜೆ.ಪಿ ತುಮಿನಾಡು ನಿರ್ದೇಶನದ ‘ಕಟಪಾಡಿ ಕಟ್ಟಪ್ಪ’ ಚಿತ್ರದಲ್ಲಿಯೂ ನಟಿಸಿದ್ದು. ಮುಂಬರುವ ದಿನಗಳಲ್ಲಿ ಚಿತ್ರ ತೆರೆ ಕಾಣಲಿದೆ.
ಈ ಪ್ರತಿಭೆಯ ಕಲಾರಂಗದ ಸಾಧನೆಗಳ ಅನಾವರಣಕ್ಕೆ ಬಹುದೊಡ್ಡ ವೇದಿಕೆ ಸಿಕ್ಕಿದೆ. ಝೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು - ಸೀಸನ್ 2’ ಕಾರ್ಯಕ್ರಮದಲ್ಲಿ ಬಹು ಪ್ರತಿಭಾನ್ವಿತ ಕಲಾವಿದರಲ್ಲಿ ತಾನೂ ಒಬ್ಬರಾಗಿ ಗುರುತಿಸಿಕೊಂಡು ಕರಾವಳಿಗೆ ಹೆಮ್ಮೆ ತಂದಿದ್ದಾರೆ. ಈ ಅಪೂರ್ವ ಪ್ರತಿಭೆಗೆ ಮತ್ತಷ್ಟು ಅವಕಾಶಗಳು ಲಭಿಸಿ, ನಟನೆಯ ಉತ್ತುಂಗದ ಶಿಖರವನ್ನೇರುವಂತಾಗಲಿ ಅನ್ನುವ ಹಾರೈಕೆ ಹಿತೈಷಿಗಳದ್ದು...