ಮೂಡುಬಿದಿರೆ, ಮಾ 30 : ಮೂಡುಬಿದಿರೆ ಕರಿಂಜೆ ಮಾರಿಂಜಗುಡ್ಡ ಎಂಬಲ್ಲಿ ಭೇಟೆಯಾಡಲು ತೆರಳಿದ್ದ ರೇಶನ್ ರೋಡ್ರಿಗಸ್ ಹಾಗೂ ತಾಕೊಡೆಯ ಸಂತೋಷ್ ತಾವ್ರೋ ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಾಕ್ಯಾರು ನಿವಾಸಿ ಎಲೆಕ್ಟ್ರೀಷಿಯನ್ ವೃತ್ತಿಯ ಶೇಖರ (33) ಎಂದು ಗುರುತಿಸಲಾಗಿದೆ. ನಿಗೂಢವಾಗಿ ಸಾವನ್ನಪ್ಪಿದ ಇವರ ಸಾವಿಗೆ ವಿದ್ಯುತ್ ಶಾಕ್ ತಗಲಿರುವುದು ಕಾರಣವಾಗಿರಬೇಕೆಂದು ಸ್ಥಳೀಯರು ಹಾಗೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ವ್ಯಕ್ತಿ ಶೇಖರ ಹಾಗೂ ಮತ್ತೊಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದರು. ಬಳಿಕ ಶೇಖರ್ ನನ್ನು ಬಂಧಿಸಿದ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಕಾಡು ಪ್ರಾಣಿಗಳನ್ನು ಭೇಟೆಯಾಡಲು ವಿದ್ಯುತ್ ಕಂಬಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಸಂಪರ್ಕಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಯನ್ನು ಮೂಡುಬಿದಿರೆ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.