ಮಂಗಳೂರು ಸೆ19 : ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಯಾಣಿಕನ ಲಗೇಜಿನಲ್ಲಿ ಕಂಡು ಬಂದ ಪವರ್ ಬ್ಯಾಂಕೊಂದು ಕೆಲಕಾಲ ಸ್ಫೋಟಕ ವಸ್ತು ಎಂಬ ಭೀತಿಗೆ ಕಾರಣವಾಯಿತು. ತಕ್ಷಣ ಸ್ಥಳಕ್ಕೆ ತಲುಪಿಸಿದ ಬಾಂಬ್ ನಿಸ್ಕ್ರೀಯ ದಳ ಹಾಗೂ ಪೊಲೀಸ್ ಅಧಿಕಾರಿಗಳು ಪ್ರಯಾಣಿಕನನ್ನು ಹಾಗೂ ಪವರ್ ಬ್ಯಾಂಕನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆಗೆ ಒಳಪಡಿಸಿ ಸ್ಫೋಟಕ ವಸ್ತು ಅಲ್ಲ ಎಂದು ಖಚಿತಪಡಿಸಿದರು.
ಸ್ಫೋಟಕ ವಸ್ತು ದೊರೆತಿದೆ ಎಂಬ ಸುದ್ದಿ ಕ್ಷಣಗಳಲ್ಲಿ ಹರಡುತ್ತಿದ್ದಂತೆಯೇ ಕೆಲ ರಾಷ್ಟ್ರೀಯ ವಾರ್ತಾ ವಾಹಿನಿಗಳು ಮಂಗಳೂರಿನಲ್ಲಿ ಮೊಬೈಲ್ ಬಾಂಬ್ ಪತ್ತೆ ಎಂಬ ವರದಿಯನ್ನು ಭಿತ್ತರಿಸತೊಡಗಿದುವು.
ಈ ವರದಿಗಳನ್ನು ತಿರಸ್ಕರಿಸಿದ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿಕೆ ನೀಡಿ ಪ್ರಯಾಣಿಕನ ಲಗೇಜಿನಲ್ಲಿ ಪವರ್ ಬ್ಯಾಂಕೊಂದು ಪತ್ತೆಯಾಗಿತ್ತು. ಸಂಶಯಾಸ್ಪದ ರೀತಿಯಲ್ಲಿ ಪವರ್ ಬ್ಯಾಂಕಿನಿಂದ ಶಭ್ದ ಬರುತ್ತಿದ್ದುದರಿಂದ ಸ್ಫೋಟಕ ವಸ್ತು ಅಲ್ಲ ಎಂದು ಖಚಿತ ಪಡಿಸಲು ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಯಿತು. ಪರಿಶೀಲನೆಯಲ್ಲಿ ಇದೊಂದು ಸೆಲ್ಫ್ ಮೇಡ್ ಪವರ್ ಬ್ಯಾಂಕೆಂದು ಖಾತರಿಪಡಿಸಲಾಯಿತು ಎಂದು ತಿಳಿಸಿದರು.
ಪ್ರಯಾಣಿಕನು ಮಂಗಳೂರಿನಿಂದ ಬೆಂಗಳೂರು ಮೂಲಕ ದುಬೈಗೆ ಹೊರಡುವನಿದ್ದನು.