ಮಂಗಳೂರು, ಮಾ 30: ಪ್ರಭು ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ಕ್ರೈಸ್ತ ಸಮುದಾಯದವರು ಶುಭ ಶುಕ್ರವಾರವನ್ನು ಭಕ್ತಿ, ಶ್ರದ್ಧೆಯಿಂದ ಕರಾವಳಿಯಾದ್ಯಂತ ಆಚರಿಸಿದರು.
ಚರ್ಚ್ ಹಾಗೂ ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ತೊಡಗಿ ಅವರು ಶಿಲುಬೆಯಲ್ಲಿ ಮರಣಿಸಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿಯವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ಶಿಲುಬೆಯ ಹಾದಿ ಆಚರಣೆ ಮಾಡಲಾಯಿತು. ಈ ಮೂಲಕ ಕ್ರೈಸ್ತ ಸಮುದಾಯದವರು ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ- ಸಂಕಷ್ಟಗಳ ಸ್ಮರಣೆ ಮಾಡಿದರು. ಇದೇ ಸಂದರ್ಭ ಧ್ಯಾನ, ಶಿಲುಬೆಯ ಆರಾಧನೆ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾಸರಗೋಡು ಸೇರಿದಂತೆ ಮಂಗಳೂರಿನ ಅನೇಕ ಚರ್ಚುಗಳಲ್ಲಿ ಇಂದು ಬೆಳಿಗ್ಗೆ ಶಿಲುಬೆಯ ಹಾದಿ ವಿಧಿ ವಿಧಾನ ನಡೆಯಿತು. ಗುಡ್ ಫ್ರೈಡೆ ಆಚರಣೆ ಹಿನ್ನೆಲೆ ಕರಾವಳಿಯ ಅನೇಕ ಚರ್ಚುಗಳಲ್ಲಿ ಪವಿತ್ರ ಬೈಬಲ್ ವಾಚನ, ಆಶೀರ್ವಚನ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.