ಮಂಗಳೂರು, ಮಾ 29: ಭಾರತೀಯ ಜನತಾ ಪಾರ್ಟಿ ಪಕ್ಷವೂ, ರಾಜಕೀಯ ಲಾಭಕ್ಕಾಗಿ ಜನರನ್ನು ಒಡೆದು ಆಳುತ್ತದೆ ಹಾಗೂ ಅವರಲ್ಲಿ ದ್ವೇಷವನ್ನು ತುಂಬುವ ಕೆಲಸ ಮಾಡುತ್ತಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಷ್ಟ್ರೀಯ ವಕ್ತಾರೆ, ಸಂವಹನ ವಿಭಾಗದ ಸಂಯೋಜಕಿ ಪ್ರಿಯಾಂಕಾ ಚತುರ್ವೇದಿ ಆರೋಪಿಸಿದ್ದಾರೆ. ಮಾರ್ಚ್ 29 ರ ಗುರುವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆ ಉದ್ದೇಶದಿಂದ ಮಾತ್ರ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ದಕ್ಷಿಣ ಕನ್ನಡಜಿಲ್ಲೆಯನ್ನು ಭೇಟಿ ಮಾಡುತ್ತಿದ್ದಾರೆ. ಆದರೆ, ದೇಶದ ಪ್ರಧಾನಿ ಮೋದಿಯವರ ಮುಂದೆ ನನ್ನದು ಮೂರು ಪ್ರಶ್ನೆಗಳಿವೆ ಎಂದು ಹೇಳಿದ ಅವರು ರಾಜ್ಯ ಸಭಾ ಪ್ರತಿನಿಧಿಗಳಾಗಿ ಕರ್ನಾಟಕದಿಂದ ಕರ್ನಾಟಕ ರಾಜ್ಯದ ಹೊರಗಿನವರನ್ನು ಹಲವು ಬಾರಿ ಆಯ್ಕೆ ಮಾಡಿದ್ದಾರೆ. ಆದರೆ ಕನ್ನಡಿಗರಿಗೆ ಉಂಟಾಗುವ ಸಮಸ್ಯೆಗಳಿಗೆ ಇವರು ಧ್ವನಿಯಾಗುತ್ತಾರೆಯೇ? ಎಂದು ಪ್ರಶ್ನಿಸಿದರು. ರಾಜ್ಯದ ಸಮಸ್ಯೆಗಳಾದ ಕಾವೇರಿ, ಮಹಾದಾಯಿ ವಿಚಾರ ಬಂದಾಗ ಪ್ರಧಾನಿ ಮೋದಿ ಮೌನಕ್ಕೆ ಶರಣಾಗುತ್ತಾರೆ ಎಂದು ಕಿಡಿಕಾರಿದರು.