ಮಂಗಳೂರು, ಮಾ 28 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಗಳನ್ನು ಖರ್ಚು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾಗಿದ್ದು, ಹೆಚ್ಚುವರಿ ಸ್ಕ್ವಾಡ್ಗಳನ್ನು ನಿಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದು ಇದೀಗ ಎಲ್ಲರ ಕಣ್ಣು ಬಂಟ್ವಾಳ ಮತ್ತು ಉತ್ತರ ಕ್ಷೇತ್ರದತ್ತ ನೆಟ್ಟಿದೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಮೊಯ್ದೀನ್ ಬಾವ ಅವರು ಚುನಾವಣೆ ಘೋಷಣೆಯಾಗುವ ಮುನ್ನವೇ ಹಕ್ಕುಪತ್ರದ ಜೊತೆಗೆ ಸೀರೆಗಳನ್ನು ಮನೆ ಮನೆಗೆ ಕೊಂಡು ಹೋಗಿ ವಿತರಿಸಿದ್ದರು. ಅಲ್ಲದೇ ತಾವೇ ಖುದ್ದು ಸೀರೆಗಳನ್ನು ವಿತರಿಸಿ ಸುದ್ದಿಯಾಗಿದ್ದರು. ಈ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ಘಟನೆ ವ್ಯಾಪಕ ಸುದ್ದಿ ಮಾಡ್ತಾ ಇದ್ದಂತೆ, ’ಮತದಾರರ ಋಣ ನನ್ನ ಮೇಲೆ ಇರುವುದರಿಂದ ನಾನು ನನ್ನ ಹುಟ್ಟುಹಬ್ಬದ ನಿಮಿತ್ತ ಸೀರೆ ವಿತರಿಸುತ್ತಿದ್ದೇನೆ’ ಎಂದು ಬಾವಾ ಸ್ಪಷ್ಟನೆ ನೀಡಿದ್ದರು. ಅಲ್ಲದೆ ಶಾಲಾ ವಿದ್ಯಾರ್ಥಿಗಳಿಗೆ ನೋಟ್ಬುಕ್ಗಳನ್ನು ಕೂಡಾ ವಿತರಣೆ ಮಾಡಿ ತಮ್ಮ ಸಾಧನೆಗಳನ್ನು ಬಿಂಬಿಸಿದ್ದರು. ಇನ್ನು ಬಂಟ್ವಾಳ ಕ್ಷೇತ್ರದ ಶಾಸಕ ರಮಾನಾಥ ರೈ ಕೂಡಾ ರಾಜ್ಯ ರಾಜಕಾರಣದ ಪ್ರಭಾವಿ ನಾಯಕ . ಹೀಗಾಗಿ ಒಟ್ಟಿನಲ್ಲಿ ಶಾಸಕರ ದುಂದುವೆಚ್ಚದ ಮೇಲೆ ನಿಗಾ ಇಟ್ಟಿರುವ ಚುನಾವಣಾಧಿಕಾರಿಗಳು ಇದೀಗ ಉತ್ತರ ಕ್ಷೇತ್ರ ಮತ್ತು ಬಂಟ್ವಾಳ ಕ್ಷೇತ್ರಗಳನ್ನು ಖರ್ಚು ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಿದ್ದಾರೆ.